ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಶರಣರು

CHN
Published on

ಚನ್ನಗಿರಿ: ಹನ್ನೆರಡನೇ ಶತಮಾನದಲ್ಲಿ ಶರಣರು ವಿಚಾರಗಳನ್ನು ವಚನಗಳ ಮೂಲಕ ಅಭಿವ್ಯಕ್ತಪಡಿಸಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದರು. ಸಮಾಜದ ಅಂಕುಡೊಂಕು ಸರಿಪಡಿಸಲು ಶ್ರಮಿಸಿದ ಶರಣರಲ್ಲಿ ಹಡಪದ ಅಪ್ಪಣ್ಣ ಒಬ್ಬರು ಎಂದು ಪಾಂಡೋಮಟ್ಟಿಯ ಶ್ರೀ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ 861 ನೇ ಮಾಸಿಕ ಶಿವಾನುಭವ ಹಾಗೂ ಶರಣ ಹಡಪದ ಅಪ್ಪಣ್ಣನವರ ಸ್ಮರಣೋತ್ಸವದಲ್ಲಿ ಮಾತನಾಡಿದರು.

ಹಡಪದ ಅಪ್ಪಣ್ಣ ಕಾಯಕನಿಷ್ಠ ಶರಣ. ಬಸವಣ್ಣನವರ ಆಪ್ತಸಹಾಯಕರಾಗಿದ್ದವರು. ಕಲ್ಯಾಣ ಕ್ರಾಂತಿಯ ಅನೇಕ ಘಟನೆಗಳಿಗೆ ಅಪ್ಪಣ್ಣ ಸಾಕ್ಷಿಯಾಗಿದ್ದಾರೆ ಎಂದರು.

ಮನಸ್ಸನ್ನು ಕಟ್ಟಬೇಕೆಂದರೆ ಮನಸ್ಸಿನ ಮೇಲೆ ನಿಯಂತ್ರಣ ಇರಬೇಕು. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಅಂತರಂಗದ ನೋಟವಾಗಿದೆ. ನೈತಿಕ, ಆಧ್ಯಾತ್ಮಿಕ, ವೈಚಾರಿಕವಾಗಿ ಒಳಗಣ್ಣು ತೆರೆಯಬೇಕು. ಅದಕ್ಕಾಗಿ ಶಿವಾನುಭವ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಸ್ಸನ್ನು ಪ್ರಫುಲ್ಲಗೊಳಿಸುವುದಾಗಿದೆ ಎಂದರು.

ಬಸವಣ್ಣನವರು ವರ್ಗ, ವರ್ಣ, ಲಿಂಗ ತಾರತಮ್ಯ ಮುಕ್ತ ವಾತಾವರಣ ಕಲ್ಪಿಸಿದ್ದರು. ದುಡಿಯುವ ಕೈಗಳಿಗೆ ಕಾಯಕ ರೂಪ ನೀಡಿದರು. ಶತಮಾನಗಳಿಂದ ತುಳಿತಕ್ಕೆ ಒಳಗಾದವರನ್ನು ಒಗ್ಗೂಡಿಸುವ ಕೆಲಸ ಮಾಡಿದರು ಎಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಅನುಭವ ಮಂಟಪವನ್ನು ಇಂದು ಮಠಗಳಲ್ಲಿ ಕಾಣಬಹುದು. ಅನ್ನದ ಅಗುಳಿನ ಹಿಂದೆ ರೈತನ ಶ್ರಮ ಎಷ್ಟಿದೆ ಎಂದು ತಿಳಿಯಬೇಕು. ಶಿವಾನುಭವ ಗೋಷ್ಠಿಗಳು ಸಂಸ್ಕಾರ, ಸಂಸ್ಕೃತಿ ತಿಳಿಸುವ ಕಾರ್ಯಕ್ರಮಗಳಾಗಿವೆ ಎಂದರು.

ಸಂಗೀತ ಶಿಕ್ಷಕ ಮಹಾಂತೇಶ ಶಾಸ್ತ್ರಿ ಹಾಗೂ ಡಾ.ಇಂಚರ ಉಪನ್ಯಾಸ ನೀಡಿದರು. ಹಿರೇಸಾದರಹಳ್ಳಿ ಎಚ್.ಎಂ.ಬಸವರಾಜಪ್ಪ, ಕಗ್ಗಿಗೌಡ್ರು ಮಹೇಶ್ವರಪ್ಪ, ಕಾಕನೂರು ಕೆ.ಜೆ.ರೇಣುಕಾ, ಎಂ.ಯು.ಚನ್ನಬಸಪ್ಪ, ಎಂ.ಬಿ.ನಾಗರಾಜ್, ಧನಂಜಯ್, ಚಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net