ಸಮ್ಮೇಳನ ಸಂಪನ್ನ ಅಭಿಮಾನ ಪಾರಮ್ಯ; ಸಾಹಿತ್ಯಾಸಕ್ತರ ಉತ್ಥಾನ ಪ್ರೀತಿ

LEAD
Published on

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಮೂರು ದಿನದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಧ್ಯುಕ್ತ ತೆರೆಕಂಡಿತು. ನಾಡಿನ ಮೂಲೆ ಮೂಲೆಗಳಿಂದ ಹರಿದು ಬಂದ ಕನ್ನಡ ಪ್ರೇಮಿಗಳು ಬಿಸಿಲಬೇಗೆಯನ್ನು ಪರಿಗಣಿಸದೆ ಸಾಹಿತ್ಯ ಸರೋವರದಲ್ಲಿ ಮುಳುಗೆದ್ದು ಕನ್ನಡದ ಮೇಲೆ ಉತ್ಥಾನ ಪ್ರೀತಿ ತೋರಿ ಅಭಿಮಾನ ಮೆರೆದರು.

ಅನವರತ ಸಂಪ್ರದಾಯದಂತೆ ನಡೆದ ಅಧ್ಯಕ್ಷರ ಮೆರವಣಿಗೆ, ಗೋಷ್ಠಿಗಳು, ಸಂವಾದ, ಪುಸ್ತಕ ಮಾರಾಟ ಎಲ್ಲ ಕಡೆಯೂ ಸ್ಪಂದನೆಗೆ ಕೊರತೆ ಕಾಣಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ವಿಚಾರವನ್ನು ಮಹಿಳೆ-ತಲ್ಲಣ, ಚಲನಚಿತ್ರ, ಕವಿಗೋಷ್ಠಿ ಹೀಗೆ ಬೇರೆ ಬೇರೆ ಗೋಷ್ಠಿಗಳ ಮೂಲಕ ತರಲಾಯಿತು. ಕೊನೆಗೆ ಸಮ್ಮೇಳನಾಧ್ಯಕ್ಷರ ಬಾಯಲ್ಲೂ ಅಭಿಪ್ರಾಯ ಹೊರಡಿಸುವ ಪ್ರಯತ್ನ ಮಾಡಲಾಯಿತು.

ಭಾರತವನ್ನು ಎರಡಾಗಿ ಒಡೆಯದೆ ಏಕದೇಶವಾಗಿ ಮುನ್ನಡೆಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ. ಹಿರಿಯರ ಕನಸು ನನಸು ಮಾಡಬೇಕಿದೆ. ಈ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು ಎಂದು ಎಚ್.ಎಸ್.ವೆಂಕಟೇಶಮೂರ್ತಿ ವಿಷಯಕ್ಕೆ ಕೊನೇ ಹಾಡಿದರು.

ಪ್ರಚಾರದ ಉದ್ದೇಶಕ್ಕೆ ಗೋಷ್ಠಿಗೆ ಅಡ್ಡಿ ಮಾಡಿದ ಒಂದು ಅಪ್ರಾಸಂಗಿಕ ಬೆಳವಣಿಗೆ ಹೊರತುಪಡಿಸಿದರೆ ಮತ್ತೆಲ್ಲವೂ ಅಚ್ಚುಕಟ್ಟು, ಸುಸೂತ್ರ. ಸಮ್ಮೇಳನ ಅಧ್ಯಕ್ಷರ ಭಾಷಣ ಸಹಜವಾಗಿ ಪ್ರಮುಖ ಆಕರ್ಷಣೆ. ಹಿಂದಿ ಹೇರಿಕೆ ಒಪ್ಪಿತವಲ್ಲ ಎಂಬ ಸಂದೇಶವನ್ನು ವೇದಿಕೆಯಿಂದ ಸರ್ವಾಧ್ಯಕ್ಷ ವೆಂಕಟೇಶಮೂರ್ತಿ ಕಳಿಸಿದರು.

ಹಿಂದಿನ ಸಮ್ಮೇಳನಾಧ್ಯಕ್ಷರ ಇಂಗ್ಲಿಷ್ ಕುರಿತ ನಿಲುವಿಗೆ ಹೋಲಿಸಿದರೆ ಇವರ ಅಭಿಪ್ರಾಯ ಒಂದಷ್ಟು ಚರ್ಚೆ ಹುಟ್ಟು ಹಾಕಿತು. ಭಾಷಾ ಮಾಧ್ಯಮ ವಿಚಾರದಲ್ಲಿ ಸುಪ್ರಿಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬೇಕೆಂಬ ಅಧ್ಯಕ್ಷರ ಅಭಿಪ್ರಾಯಕ್ಕೆ ಮಾನ್ಯತೆ ನೀಡಿ ಇನ್ನೊಂದು ತಿಂಗಳ ಬಳಿಕ ಸಭೆ ಕರೆದು ತೀರ್ವನಿಸಲು ಸರ್ಕಾರ ಮುಂದಾಗಿದ್ದು ಸಮ್ಮೇಳನದ ಒಂದು ಯಶವೂ ಆಯಿತು.

ಗೋಷ್ಠಿಗಳ ಲೆಕ್ಕಾಚಾರ

ಈ ಹಿಂದಿನ ಸಮ್ಮೇಳನಗಳಂತೆ ಈ ಬಾರಿ ಗೋಷ್ಠಿಗಳಲ್ಲೂ ಅದೇ ರ್ಚವಿತ ಚರ್ವಣ ವಿಷಯ ಎನಿಸಿದರೂ ಕೇಳುಗರ ಆಸಕ್ತಿಯೇನೂ ಕಡಿಮೆ ಆಗಲಿಲ್ಲ. ಪ್ರಧಾನ ವೇದಿಕೆಯತ್ತಲೇ ಜನ ಚಿತೆôಸಿದ್ದರಿಂದ ಸಮಾನಾಂತರ ವೇದಿಕೆಗಳು ಖಾಲಿ ಹೊಡೆದವು. ಒಟ್ಟಾರೆ, 18 ಸಾಹಿತ್ಯ ಗೋಷ್ಠಿಗಳು ನಡೆದವು.

ಇದರಲ್ಲಿ ಸ್ತ್ರೀತಲ್ಲಣ ಕುರಿತ ಗೋಷ್ಠಿ ಮತ್ತು ಕನ್ನಡ ಮಾಧ್ಯಮ ಮತ್ತು ಶಿಕ್ಷಣ, ಮಾಧ್ಯಮ ಸವಾಲು, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಗೋಷ್ಠಿ ಹೆಚ್ಚು ಪ್ರಭಾವ ಬೀರುವಂತಿದ್ದವು. ಮೂರು ವಿಭಾಗದಲ್ಲಿ ನಡೆದ ಕವಿಗೋಷ್ಠಿಯಲ್ಲಿ ನೂರು ಮಂದಿ ಕವಿತಾ ಪ್ರತಿಭೆ ಪ್ರಸ್ತುತಪಡಿಸಿದರು. ಕನ್ನಡ ಕುರಿತ ಒಂದು ಗೋಷ್ಠಿ, 85 ಮಂದಿಗೆ ಸನ್ಮಾನ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಸಮ್ಮೇಳನದ ತೂಕ ಹೆಚ್ಚಿಸಿದವು.

ಬಾರದ ಕವಿ, ಸಾಹಿತಿಗಳು: ಬಿಸಿಲೂರು ಎಂಬ ಕಾರಣಕ್ಕೋ ಅಥವಾ ದೂರ ಎಂಬ ನೆಪವೋ ಹಿರಿಯ ಸಾಹಿತಿಗಳು ಸಮ್ಮೇಳನದತ್ತ ಮುಖ ಮಾಡಲಿಲ್ಲ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಜವಾಬ್ದಾರಿ ನಿಭಾವಣೆಗೆ ಆಗಮಿಸಿದ್ದನ್ನು ಬಿಟ್ಟರೆ, ದೊಡ್ಡ ರಂಗೇಗೌಡ, ಸಿದ್ದಲಿಂಗಯ್ಯ ಹಾಜರಿ ಹಾಕಿದರಷ್ಟೆ.

ಊಟೋಪಚಾರ

ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಊಟಕ್ಕಾಗಿ ಪರದಾಟ ಸಾಮಾನ್ಯ ಸಂಗತಿ ಆಗಿರುತ್ತಿತ್ತು. ಕಳೆದ 2-3 ಸಮ್ಮೇಳನಗಳಿಂದೀಚೆಗೆ ಊಟ ವಿತರಣೆಯಲ್ಲಿನ ಅಚ್ಚುಕಟ್ಟುತನ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ. ಕಲಬುರಗಿಯಲ್ಲೂ ಈ ಅಚ್ಚುಕಟ್ಟುತನ ಮುಂದುವರಿಸಿತು.

ಕಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ, ಗೋಧಿ ಹುಗ್ಗಿ, ಕಾಳು ಪಲ್ಯ ಸವಿದ ನಾಡಿನ ಮಂದಿ ಊಟದ ರುಚಿಯನ್ನು ಸ್ಮರಿಸಿಕೊಳ್ಳುತ್ತಲೇ ಹಾವೇರಿಯಲ್ಲಿ ಮತ್ತೆ ಭೇಟಿಯಾಗೋಣ ಎಂದು ತಮ್ಮೂರಿನತ್ತ ಹೊರಟರು. ಒಂದು ಮಾಹಿತಿ ಪ್ರಕಾರ, ಮೂರು ದಿನದಲ್ಲಿ ಸರಿಸುಮಾರು 6 ಲಕ್ಷ ಊಟ ವಿತರಿಸಲಾಗಿದೆ. ಅಂದಾಜು 5 ಲಕ್ಷದಷ್ಟು ಜನ ಮೂರು ದಿನಗಳಲ್ಲಿ ಬಂದುಹೋಗಿದ್ದಾರೆ,

ಮಣ್ಣಾದ ತ್ಯಾಜ್ಯ

ಸಮ್ಮೇಳನದಲ್ಲಿ ಬಳಕೆಯಾದ ತ್ಯಾಜ್ಯಗಳನ್ನು ಗುಲ್ಬರ್ಗ ವಿವಿಯ ಖಾಲಿ ಜಾಗದ ತಗ್ಗು ಪ್ರದೇಶಗಳಿಗೆ ತುಂಬುವ ಕೆಲಸ ನಡೆಯಿತು. ಊಟದ ತಟ್ಟೆಗಳ ಜತೆ ತ್ಯಾಜ್ಯ ಪ್ಲಾಸ್ಟಿಕ್ ಸೇರಿಸಿ ಜೆಸಿಬಿ ಮೂಲಕ ತಳ್ಳಿ ಮಣ್ಣು ಮುಚ್ಚಲಾಯಿತು.

ಪುಸ್ತಕ ಲೋಕ

ಸುಮಾರು 500 ಮಳಿಗೆಗಳಲ್ಲಿ ಪುಸ್ತಕ ಮಾರಾಟ ಜೋರಾಗಿಯೇ ನಡೆಯಿತು. ಸ್ಪರ್ಧಾತ್ಮಕ ಪುಸ್ತಕಗಳೇ ಹೆಚ್ಚು ಮಾರಾಟವಾಯಿತು ಎಂಬ ಮಾತಿನ ನಡುವೆಯೇ ಪ್ರಮುಖ ಸಾಹಿತಿಗಳ ಪುಸ್ತಕ ಮಾರಾಟವೂ ಹಿಂದೆ ಬೀಳಲಿಲ್ಲ. ಸಮ್ಮೇಳನಾಧ್ಯಕ್ಷ ಎಚ್​ಎಸ್ವಿ, ಎಸ್.ಎಲ್.ಬೈರಪ್ಪ ಕೃತಿಗಳು ಹೆಚ್ಚು ಮಾರಾಟವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net