ಜೂ.29ರಂದು ಜಿ.ಎಸ್.ಬಿ ಸೇವಾ ಸಂಘದ ವೈದ್ಯಕೀಯ ಮಿಷನ್‌ನ 85ನೇ ವರ್ಷಾಚರಣೆ

Published on

ಮಂಗಳೂರು: ಮಂಗಳೂರಿನ ಜಿ.ಎಸ್.ಬಿ ಸೇವಾ ಸಂಘದ ವೈದ್ಯಕೀಯ ಮಿಷನ್‌ನ 85ನೇ ವರ್ಷಾಚರಣೆ ಜೂ.29ರಂದು ಬೆಳಗ್ಗೆ 10ಕ್ಕೆ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಸುಜೀರ್ ಸಿ.ವಿ.ನಾಯಕ್ ಸಭಾಗೃಹದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1940ರಲ್ಲಿ ಪ್ರಾರಂಭವಾದ ಜಿ.ಎಸ್.ಬಿ ಸೇವಾ ಸಂಘದ ವೈದ್ಯಕೀಯ ಮಿಷನ್ ಕಳೆದ 85 ವರುಷಗಳಲ್ಲಿ ರಥಬೀದಿಯಲ್ಲಿ ಒಂದು ಕೊಠಡಿಯಲ್ಲಿ, ವಿ.ಟಿ.ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರ ಹಾಗೂ ಪ್ರಸ್ತುತ ಸುಜೀರ್ ಸಿ.ವಿ.ನಾಯಕ್ ಸಭಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೆಡಿಕಲ್ ಮಿಷನಿನ ಸೇವೆಯಲ್ಲಿ ಸುಮಾರು 50000 ರೋಗಿಗಳಿಗೆ ವೈದ್ಯಕೀಯ ತಪಾಸಣೆ, ವಿಶೇಷ ತಪಾಸಣೆಗಳು, ಹೆರಿಗೆ ಸಂಬಂಧಪಟ್ಟ ಸಹಾಯ, ಶಸ್ತ್ರಚಿಕಿತ್ಸೆ, ಕಣ್ಣು ತಪಾಸಣೆ ಹಾಗೂ ಕನ್ನಡಕಗಳ ವಿತರಣೆ ಹಾಗೂ ಔಷಧಗಳನ್ನು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸೇವಾ ರೂಪದಲ್ಲಿ ಒದಗಿಸಲಾಗಿದೆ. ಪ್ರಸ್ತುತ ಈ ಎಲ್ಲ ವೈದ್ಯಕೀಯ ಸೇವೆಗಳು ಮುಂದುವರೆಯುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ವೈದಕೀಯ ಮಿಷನ್‌ನಲ್ಲಿ ಸೇವೆ ನೀಡಿದ ಹಳೆಯ ಪೀಳಿಗೆಯ ಡಾ. ಕುಳೈ ರಾಘವೇಂದ್ರ ಕಿಣಿ, ಡಾ. ಯು.ಪದ್ಮನಾಭ ಮಲ್ಯ, ಡಾ. ಕರ್ನಲ್ ಮಿರಾಜಕರ್, ಡಾ. ಎಂ.ಪಿ.ಪೈ, ಡಾ. ವೆಂಕಟರಾವ್ ಸಹಿತ ಸುಮಾರು ಮೂವತ್ತು ಮಂದಿ ವೈದ್ಯರ ಸಂಸ್ಮರಣೆ ಹಾಗೂ ಪ್ರಸ್ತುತ ಸೇವೆ ನೀಡುತ್ತಿರುವ ಇಂದಿನ ಪೀಳಿಗೆಯ ವೈದ್ಯರಿಗೆ ಸನ್ಮಾನ ನಡೆಯಲಿದೆ. ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಸಂಸ್ಥೆಯ ಇಂದಿನ ಅಧ್ಯಕ್ಷ, ಹಿರಿಯ ವೈದ್ಯಕೀಯ ಪ್ರಾಧ್ಯಾಪಕ ಡಾ. ಕಸ್ತೂರಿ ಮೋಹನ್ ಪೈ ಅವರ ಹಿರಿತನದಲ್ಲಿ ಸುಮಾರು 100 ಮಂದಿ ಕಿರಿಯ ಪೀಳಿಗೆಯ ವೈದ್ಯರನ್ನು ಸನ್ಮಾನಿಸಲಾಗುವುದು ಎಂದರು.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರತನಕ ಹಿರಿಯ ನಾಗರಿಕರಿಗಾಗಿ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದಲ್ಲಿ ವೈದ್ಯಕೀಯ ಶಿಬಿರ ನಡೆಸಲಾಗುವುದು. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಅಗತ್ಯ ಇರುವವರಿಗೆ ಕಣ್ಣಿನ ಪೊರೆಯ ಶಸಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಮಧುಮೇಹ, ಬಿಪಿ, ಕಿವಿ, ಮೂಗು, ಗಂಟಲು ತಪಾಸಣೆ, ಸೀರೋಗ ತಪಾಸಣೆ, ಇತರ ವೈದ್ಯಕೀಯ ಸೇವೆಗಳು ಲಭ್ಯ. ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಬಹುದು ಎಂದರು.

ಸಂಸ್ಥೆಯ ಖಜಾಂಚಿ ಕುಂಬ್ಳೆ ನರಸಿಂಹ ಪ್ರಭು, ಕಾರ್ಯದರ್ಶಿ ಡಾ. ರಮೇಶ ಪೈ, ಶಿಬಿರ ಮುಖ್ಯ ಸಂಯೋಜಕರಾದ ಎಂ. ಆರ್. ಕಾಮತ್, ಗೋವಿಂದರಾಯ ಪ್ರಭು, ಕಾರ್ಯಕ್ರಮದ ಸೂತ್ರ ಸಂಚಾಲಕಿ ಸುಚಿತ್ರಾ ಶೆಣೈ, ಆಡಳಿತಾಧಿಕಾರಿ ವೆಂಕಟೇಶ ಎನ್. ಬಾಳಿಗಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net