ಡಿಕೆಶಿ ಕಚೇರಿಯಲ್ಲಿ 85 ವರ್ಷದ ನಿವೃತ್ತ ಅಧಿಕಾರಿಗೂ ಉದ್ಯೋಗ : ಎಚ್. ವಿಶ್ವನಾಥ್ ತೀವ್ರ ಅಸಮಾಧಾನ

mysore
Published on

ಮೈಸೂರು: ರಾಜ್ಯದ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿಲ್ಲ. ಶೇ.70 ರಷ್ಟು ಅನುದಾನವು ವೇತನ, ಸಾರಿಗೆ, ಸರ್ಕಾರ ಪಡೆದ ಸಾಲದ ಬಡ್ಡಿ ತೀರಿಸಲು ಬಳಕೆಯಾಗುತ್ತಿದ್ದು, ಶೇ.30 ರಷ್ಟು ಅನುದಾನ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಆರ್ಥಿಕ ನೀತಿ ದುರ್ಬಲವಾಗಿ ಅವಿವೇಕತನದಿಂದ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಹಲವಾರು ಇಲಾಖೆಗಳಲ್ಲಿ ಇರುವ ಅಧಿಕಾರಿಗಳಿಗೆ ಕೆಲಸ ಇಲ್ಲ. ಹೀಗಿರುವಾರ ಹಲವಾರು ಇಲಾಖೆಗಳಿಗೆ 30 ರಿಂದ 40 ನಿವೃತ್ತ ಅಧಿಕಾರಿಗಳನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ 1.50 ರಿಂದ 2 ಲಕ್ಷ ರೂ.ವರೆಗೆ ವೇತನ ನೀಡಲಾಗುತ್ತಿದೆ. ಈ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಚಿಂತನೆ ಮಾಡದ ನೀವು ಯಾವ ಸೀಮೆಯ ಹಣಕಾಸು ಸಚಿವ ಎಂದು ಸಿದ್ದರಾಮಯ್ಯ ವಿರುದ್ಧ ಬುಧವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಚೇರಿಯಲ್ಲಿ 85 ವರ್ಷದ ನಿವೃತ್ತ ಅಧಿಕಾರಿಯೊಬ್ಬರನ್ನು ಸಲಹೆಗಾರರಾಗಿ ನೇಮಕ ಮಾಡಲಾಗಿದ್ದು, ಅವರಿಗೆ 1.50 ಲಕ್ಷ ರೂ. ವೇತನ ನೀಡಲಾಗುತ್ತಿದೆ. ರಾಜ್ಯವನ್ನು ದಿವಾಳಿ ಮಾಡಲು ಈ ರೀತಿಯ ನೇಮಕಾತಿ ಮಾಡುತ್ತಿದ್ದೀರಾ? ಕೆಐಎಡಿಬಿಗೆ 42, ಎಂಎಸ್‌ಐಎಲ್ಗೆ 41 ನಿವೃತ್ತ ಅಧಿಕಾರಿಗಳನ್ನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ನೀವು ಯಾವ ಸೀಮೆ ಆಡಳಿತ ನಡೆಸುತ್ತಿದ್ದೀರಾ? ಈ ಹಿಂದಿನ ಸರ್ಕಾರದಲ್ಲೂ ಈ ರೀತಿಯ ನೇಮಕಾತಿಗಳು ನಡೆದಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಕೇಂದ್ರ ಸರ್ಕಾರದಲ್ಲೂ ಇದೇ ಮಾದರಿಯಲ್ಲಿ ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳಿಗೆ ಸಲಹೆಗಾರರಾಗಿ ನೇಮಕವಾಗಿರುವ ನಿವೃತ್ತ ಅಧಿಕಾರಿಗಳನ್ನು ಕೆಲಸದಿಂದ ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಜಾರಿಗೆ ಬರಲಿಲ್ಲ. ಮುಖ್ಯಮಂತ್ರಿ ಮಾತಿಗೆ ಎಷ್ಟು ಬೆಲೆ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಲೋಕಸಭಾ ಚುನಾವಣೆಯ ಶಿಷ್ಟಾಚಾರ ಇದ್ದ ಸಂದರ್ಭದಲ್ಲಿ ಕೌಶಲಾಭಿವೃದ್ಧಿ ಇಲಾಖೆಗೆ ಆಂಧ್ರಪ್ರದೇಶದ ನಿವೃತ್ತ ಅಧಿಕಾರಿಯೊಬ್ಬರನ್ನು ತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಕೂಡಲೇ ಎಲ್ಲ ಇಲಾಖೆಗಳಲ್ಲಿರುವ ಸಲಹೆಗಾರರನ್ನು ಕೈಬಿಟ್ಟು ಆರ್ಥಿಕ ಶಿಸ್ತು ತರಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net