ಕಾಲುಬಾಯಿ ಲಸಿಕೆ ಶೇ.83 ಪ್ರಗತಿ, ಜಿಲ್ಲೆಯಲ್ಲಿ ಬಾಕಿ ರಾಸುಗಳಿಗೆ ಕೂಂಬಿಂಗ್‌ಅಭಿಯಾನದಲ್ಲಿ ಲಸಿಕೆ

kalubayi
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಪಶುವೈದ್ಯ ಸಂಘ ಹಾಗೂ ಸರ್ಕಾರದ ಹಗ್ಗಾಜಗ್ಗಾಟದ ನಡುವೆ ಸುಖಾಂತ್ಯ ಕಂಡಿದ್ದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಜಿಲ್ಲೆಯಲ್ಲಿ ಶೇ.83 ಪ್ರಗತಿ ಸಾಧಿಸಿದೆ.

ಅ.10ರಿಂದ ನ.24ರವರೆಗೆ ನಿರಂತರವಾಗಿ ನಡೆದ ಅಭಿಯಾನದಲ್ಲಿ 1,51,234 ಜಾನುವಾರುಗಳಿಗೆ ಲಸಿಕೆ ಹಾಕುವಲ್ಲಿ ಜಿಲ್ಲಾ ಪಶುಪಾಲನಾ ಇಲಾಖೆ ಯಶಕಂಡಿದೆ. ಕೆಲವೊಂದು ತಾಂತ್ರಿಕ ಹಾಗೂ ಇತರ ಕಾರಣಗಳಿಂದ ಜಿಲ್ಲೆಯಲ್ಲಿ ಗುರುತಿಸಿರುವ 31,253 ಜಾನುವಾರುಗಳಿಗೆ ಲಸಿಕೆ ಹಾಕುವುದು ಬಾಕಿ ಇದ್ದು, ಇನ್ನೆರಡು ತಿಂಗಳ ತರುವಾಯ ಕೂಂಬಿಂಗ್ ಅಭಿಯಾನದಲ್ಲಿ ಲಸಿಕೆ ಹಾಕಲಾಗುವುದು ಎಂದು ಪಶುಪಾಲನಾ ಇಲಾಖೆ ತಿಳಿಸಿದೆ.

ಹಲವು ಗೊಂದಲ ನಿವಾರಣೆ ಬಳಿಕ ಚರ್ಮಗಂಟು ಸೋಂಕಿರುವ ಪಶುಗಳನ್ನು ಹೊರತುಪಡಿಸಿ ಆರೋಗ್ಯವಂತ ಪಶುಗಳಿಗಷ್ಟೇ ಲಸಿಕೆ ಹಾಕುವ ಷರತ್ತಿಗೆ ಸರ್ಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅ.10ರಿಂದ ಅಭಿಯಾನ ಆರಂಭಿಸಲಾಗಿತ್ತು.

ಸಾಂಕ್ರಾಮಿಕ ರೋಗ: ಕಾಲುಬಾಯಿ ರೋಗ ತೀವ್ರವಾಗಿ ಹರಡುವ ಕಾಯಿಲೆಯಾಗಿದ್ದು, ದನ, ಎಮ್ಮೆ, ಕುರಿ, ಮೇಕೆ, ಜಿಂಕೆ, ಹಂದಿ ಹಾಗೂ ಗೊರಸುಳ್ಳ ಪ್ರಾಣಿಗಳಲ್ಲಿ ಈ ರೋಗ ಕಂಡುಬರುತ್ತದೆ. ಜಾನುವಾರುಗಳಲ್ಲಿ ಶೇ.40 ಹಾಲಿನ ಇಳುವರಿ ಕಡಿಮೆಯಾಗುತ್ತದೆ, ಇದನ್ನು ನಿಯಂತ್ರಿಸಿ ರೈತರನ್ನು ಸಂಕಷ್ಟದಿಂದ ಮೇಲೆತ್ತುವ ದಿಸೆಯಲ್ಲಿ ಸರ್ಕಾರ ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮವನ್ನು ಅಭಿಯಾನದ ಮಾದರಿಯಲ್ಲಿ ಜಾರಿಗೊಳಿಸಿತ್ತು.

182487ಪಶುಗಳಿಗೆ ಲಸಿಕಾ ಗುರಿ: ಜಿಲ್ಲೆಯಾದ್ಯಂತ ಪಶು ವೈದ್ಯಕೀಯ ಸಿಬ್ಬಂದಿ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜಿಲ್ಲೆಯಲ್ಲಿ 1,82,487 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇದಕ್ಕಾಗಿ 43 ತಂಡ ರಚಿಸಿ 227 ಸಿಬ್ಬಂದಿ ಕಾರ್ಯನಿರ್ವಹಿಸಿದ್ದರು ಎಂದು ಪಶುಪಾಲನಾ ಇಲಾಖೆ ತಿಳಿಸಿದೆ. ದೇವನಹಳ್ಳಿಯಲ್ಲಿ 34,773, ದೊಡ್ಡಬಳ್ಳಾಪುರ 49,015, ಹೊಸಕೋಟೆ 30,536 ಹಾಗೂ ನೆಲಮಂಗಲದಲ್ಲಿ 36,910 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಇಲಾಖೆ ಮಾಹಿತಿ ದಾಖಲಿಸಿದೆ.

ಸರ್ಕಾರದ ಸೂಚನೆಯಂತೆ ಜಿಲ್ಲೆಯಾದ್ಯಂತ ನಡೆಸಿದ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಯಶ ಕಂಡಿದೆ. ಕರೊನಾ ಮುಂಜಾಗ್ರತೆಯೊಂದಿಗೆ ಪಶು ವೈದ್ಯಕೀಯ ಸಿಬ್ಬಂದಿ ಅಭಿಯಾನದಲ್ಲಿ ಕರ್ತವ್ಯನಿರ್ವಹಿಸಿದ್ದಾರೆ. ಈ ವೇಳೆ ರೈತರಲ್ಲಿ ರೋಗದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಡಾ.ಬಾಲಚಂದ್ರ, ಉಪನಿರ್ದೇಶಕ ಪಶುಪಾಲನ ಇಲಾಖೆ 3 ತಿಂಗಳ ಒಳಗಿನ ಕರು, ಮಾಲೀಕರ ನಿರಾಕರಣೆ, 7-8 ತಿಂಗಳ ಗರ್ಭ ಧರಿಸಿದ ಹಸು, ಚರ್ಮಗಂಟು ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಲಸಿಕೆ ಹಾಕಲಾಗಿಲ್ಲ. ಇವುಗಳ ಅಂಕಿ-ಅಂಶಗಳನ್ನು ದಾಖಲಿಸಿದ್ದು 2ನೇ ಸುತ್ತಿನಲ್ಲಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅನಿಲ್‌ಕುಮಾರ್, ಪಶು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net