ನಿರಾಶ್ರಿತರನ್ನು ವಾಪಸ್ ಕಳುಹಿಸಿದ ಮುರಗಮಲ್ಲಾ ಗ್ರಾಮಸ್ಥರು

22cmy3
Published on

ಚಿಂತಾಮಣಿ: ನಿರಾಶ್ರಿತರ ಶಿಬಿರದಲ್ಲಿದ್ದ ಮುರಗಮಲ್ಲಾ ದರ್ಗಾ ಬಳಿ ಭಿಕ್ಷೆ ಬೇಡುತ್ತಿದ್ದ 15 ಮಂದಿಯನ್ನು ಮತ್ತೆ ಗ್ರಾಮಕ್ಕೆ ಬಿಡಲು ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ಗುರುವಾರ ಭಿಕ್ಷುಕರನ್ನು ಕರೆತಂದ ಜೀಪುಗಳನ್ನು ಅಡ್ಡಗಟ್ಟಿ ವಾಪಾಸ್ ಕಳುಹಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು, ಭಿಕ್ಷುಕರು ಮತ್ತು ನಿರಾಶ್ರಿತರಿಗೆ ತಾಲೂಕು ಆಡಳಿತ ತಹಸೀಲ್ದಾರ್ ಕಚೇರಿ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಕಲ್ಪಿಸಿತ್ತು. ಲಾಕ್‌ಡೌನ್ ಸಡಿಲಿಕೆ ಆದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಡಲಾಗಿದೆ, ಇನ್ನು ಉಳಿದ 15 ನಿರಾಶ್ರಿತರು ತಾವು ಈ ಹಿಂದೆ ಮುರುಗಮಲ್ಲಾ ದರ್ಗಾದ ಬಳಿ ಭಿಕ್ಷೆ ಬೇಡಿಕೊಂಡು ಇದ್ದಿದ್ದು, ಅಲ್ಲಿಗೆ ಹೋಗುವುದಾಗಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಗುರುವಾರ ರಾತ್ರಿ ಅವರನ್ನು ಮುರುಗಮಲ್ಲಾ ಗ್ರಾಮದಲ್ಲಿ ಬಿಟ್ಟು ಹೋಗಲು 3 ಜೀಪುಗಳಲ್ಲಿ ಕರೆ ತಂದಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ಭಿಕ್ಷುಕರನ್ನು ಗ್ರಾಮದಲ್ಲಿ ಬಿಟ್ಟುಹೋಗದಂತೆ ತಡೆಯೊಡ್ಡಿ ವಾಪಸ್ ಕಳುಹಿಸಿದ್ದಾರೆ.

ಲಾಕ್‌ಡೌನ್ ವೇಳೆ 60ಕ್ಕೂ ಹೆಚ್ಚು ಮಂದಿಯನ್ನು ತಾಲೂಕು ಆಡಳಿತ ಇಲ್ಲಿಂದ ಕರೆದುಕೊಂಡು ಹೋಗಿತ್ತು. ಅವರಲ್ಲಿ ಹಲವರನ್ನು ಅವರವರ ಊರುಗಳಿಗೆ ಕಳಿಸಿಕೊಟ್ಟಿದ್ದಾರೆ, ಉಳಿದ 15 ಮಂದಿಯನ್ನು ದರ್ಗಾ ಬಳಿ ಬಿಡಲು ಗುರುವಾರ ರಾತ್ರಿ ಬಂದಿದ್ದರು. ಲಾಕ್‌ಡೌನ್‌ನಿಂದಾಗಿ ದರ್ಗಾಗೆ ಬೀಗ ಜಡಿಯಲಾಗಿದೆ. ಇಲ್ಲಿ ಅವರಿಗೆ ಊಟದ ವ್ಯವಸ್ಥೆ ಇಲ್ಲ, ಅವರೆಲ್ಲರನ್ನು ಇಲ್ಲಿಗೆ ತಂದು ಬಿಡುವ ಮುನ್ನ ಗ್ರಾಮಸ್ಥರ ಗಮನಕ್ಕೂ ತಂದಿಲ್ಲ. ಆದ್ದರಿಂದ ಅದೇ ಜೀಪಿನಲ್ಲಿ ಅವರನ್ನು ವಾಪಸ್ ಕಳುಹಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅನ್ಸರ್‌ಖಾನ್ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net