

ಕಾರವಾರ: ಅನ್ನ ಭಾಗ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹೊರಟಿರುವ ಸರ್ಕಾರ ಕೆಲವು ಬದಲಾವಣೆಗೆ ಮುಂದಾಗಿದೆ. ಯೋಜನೆಯ ಫಲವನ್ನು ಹಲವು ಅಪಾತ್ರರು ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಕಳೆದ 6 ತಿಂಗಳಿಂದ ಪಡಿತರ ಪಡೆಯದ ಚೀಟಿಗಳನ್ನು ರದ್ದು ಮಾಡುವಂತೆ ಆದೇಶಿಸಿದೆ. ಅಲ್ಲದೆ, ನಿಜವಾದ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರಕುವಂತೆ ಮಾಡುವ ಸಲುವಾಗಿ ಈಗಾಗಲೇ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಿದೆ. ಆದರೆ, ಈ ವರ್ಷ ಜುಲೈ ಅಂತ್ಯಕ್ಕೆ ಇರುವ ಪಡಿತರ ಚೀಟಿಗಳ ಸಂಖ್ಯೆಗಿಂತ ಒಂದೂ ಚೀಟಿ ಜಾಸ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆಯನ್ನು ಆಹಾರ ಇಲಾಖೆಗೆ ನೀಡಿದೆ.
ಜಿಲ್ಲೆಯಲ್ಲಿ ಹೊಸದಾಗಿ ಪಡಿತರ ಚೀಟಿ ಬೇಕು ಎಂದು ಅರ್ಜಿ ಸಲ್ಲಿಸಿದ 5400 ಅರ್ಜಿಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ. ಅವುಗಳನ್ನು ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವ ಎಂದರೆ ಚೀಟಿ ನೀಡುವ ಅಥವಾ ತಿರಸ್ಕರಿಸುವ ಪ್ರಕ್ರಿಯೆ ನಡೆದಿದೆ. ಇನ್ನೊಂದು ಹಂತದಲ್ಲಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ರೇಶನ್ ಪಡೆಯದ 8290 ಕಾರ್ಡ್ಗಳಿದ್ದು, ಅವುಗಳನ್ನು ರದ್ದು ಮಾಡುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಇದುವರೆಗೆ ಆಹಾರ ಇಲಾಖೆಯಿಂದ 4338 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದ್ದು, ರೂ. 46,29,100 ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ.
ಪಡಿತರ ಹಂಚಿಕೆ ಹಾಗೂ ಇತರ ವಿಷಯಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಗಂಗೂಬಾಯಿ ಮಾನಕರ್ ಅವರು ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಪಡಿತರ ಚೀಟಿಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ರದ್ದು ಪಡಿಸಿ ಅರ್ಹರಿಗೆ ಪಡಿತರ ಚೀಟಿಗಳನ್ನು ವಿತರಿಸಬೇಕು ಹಾಗೂ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ 5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲಾಗಿ ನೇರ ಫಲಾನುಭವಿಗೆ ವರ್ಗಾವಣೆ (ಡಿಬಿಟಿ)ಮೂಲಕ ಹಣ ಪಾವತಿಯಾಗದೆ ಇರುವ ಪಡಿತರ ಚೀಟಿಗಳನ್ನು ಪರಿಶೀಲಿಸಿ ಪಡಿತರದಾರರಿಗೆ ಹಣ ಪಾವತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ಪಡಿತರ ಅಕ್ರಮ ಸಾಗಣೆ ಪತ್ತೆ ಹಚ್ಚಿ ಕ್ರಮ ವಹಿಸಬೇಕು. ಪಡಿತರ ಚೀಟಿಗೆ ಆಧಾರ ಹಾಗೂ ಬ್ಯಾಂಕ್ ಖಾತೆ ಸೀಡಿಂಗ್ ಮಾಡುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಸಮಸ್ಯೆ ಇದ್ದರೆ ಲೀಡ್ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಿ ಎಂದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ ಹಾಗೂ ಇತರ ಅಽಕಾರಿಗಳು ಸಭೆಯಲ್ಲಿದ್ದರು.