ಪ್ಲಾಸ್ಟಿಕ್ ಗೂಡಿನಲ್ಲಿ ವಾಸವಿದ್ದ 82 ವರ್ಷದ ಅನಾಥ ವೃದ್ಧೆಗೆ ಸೂರು ನಿರ್ಮಿಸಿ ಕೊಟ್ಟ ಯುವಕರು!

7 ckm 11
Published on

ಚಿಕ್ಕಮಗಳೂರು: ನಗರ ಹೊರವಲಯದ ಕಲ್ಲುದೊಡ್ಡಿ ಶಾಂತಿನಗರದ ಆಶ್ರಯ ಬಡಾವಣೆಯಲ್ಲೊಬ್ಬರು 82ರ ಅನಾಥ ಅಂಗವಿಕಲ ವಯೋವೃದ್ಧೆ. ನಿಲ್ಲಲು ಸಾಮರ್ಥ್ಯವಿಲ್ಲ. ತಂಗಲು ಸೂರಿಲ್ಲ. ಲಾಕ್‍ಡೌನ್ ಸಂದರ್ಭ ಫುಡ್ ಕಿಟ್ ನೀಡಲು ಹೋದವರಿಗೆ ಕಂಡಿದ್ದು ಆ ವೃದ್ಧೆಯ ಅಸಹಾಯಕ ಸ್ಥಿತಿ. ಖಾಲಿ ನಿವೇಶನವೊಂದರಲ್ಲಿ ಗೋಣಿಚೀಲ, ಪ್ಲಾಸ್ಟಿಕ್ ಶೀಟ್‍ಗಳನ್ನು ಹೊದಿಸಿದ ಸಣ್ಣ ಗೂಡೊಂದರಲ್ಲಿ ಮರಿಯಮ್ಮ ಎಂಬ ವೃದ್ಧೆಯ ವಾಸ. ಮಳೆ ಬಂದರೂ ಅಲ್ಲೇ ಇರಬೇಕು. ಚಳಿಗಾಲದಲ್ಲೂ ಅಲ್ಲೇ ಇರಬೇಕು. ಇರುವ ಒಬ್ಬ ಪುತ್ರ ಅವಿವಾಹಿತ ಮತ್ತು ಪಾರ್ಶವಾಯು ಪೀಡಿತ. ಅದೇ ಬಡಾವಣೆಯ ಮನೆಯೊಂದರಲ್ಲಿ ವಾಸ. ತನ್ನ ತಾಯಿಯ ನೆರವಿಗೆ ಬರಲು ಆತನಿಗೂ ಸಾಧ್ಯವಿಲ್ಲದ ಅಸಹಾಯಕತೆ. ಹೀಗಾಗಿ ವೃದ್ಧೆ ತೆವಳುತ್ತಲೇ ತನ್ನೆಲ್ಲ ಕೆಲಸಗಳನ್ನು ಮಾಡಿಕೊಳ್ಳಬೇಕಾದ ಸ್ಥಿತಿ.

ವೃದ್ಧೆ ಸ್ವಾವಲಂಬಿ:
ಇಷ್ಟಾಗಿಯೂ ವೃದ್ಧಾಶ್ರಮ ಸೇರಲು ಒಲ್ಲದೆ ಸಾಧ್ಯವಾದಷ್ಟು ದಿನ ಸ್ವಾವಲಂಬಿಯಾಗಿರುವ ನಿರ್ಧಾರ ಮಾಡಿರುವುದನ್ನು ಗಮನಿಸಿ ಬಿಜೆಪಿ ಕಾರ್ಯಕರ್ತರನ್ನು ಒಳಗೊಂಡ ಉತ್ಸಾಹಿ ಯುವಕರ ಸೂರು ಬಳಗದ ಒಳಗಣ್ಣು ತೆರೆಯಿತು. ಮನಸು ಮಿಡಿದು ಅವರಿಗೊಂದು ಸೂರು ನಿರ್ಮಿಸುವ ಸಂಕಲ್ಪ ಮಾಡಿತು. ಅಂತೆಯೇ ಈ ಬಳಗದವರು ತಗಡಿನ ಶೀಟುಗಳಿಂದ ಕೂಡಿದ ತಾತ್ಕಾಲಿಕ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ದೀಪದ ಮಬ್ಬು ಬೆಳಕಲ್ಲೇ ರಾತ್ರಿ ಕಳೆಯುತ್ತಿದ್ದ ಮರಿಯಮ್ಮ ಅವರಿಗೆ ಈಗ ವಸತಿ ಜತೆಗೆ ವಿದ್ಯುತ್ ಸೌಲಭ್ಯವೂ ಸಿಕ್ಕಿದೆ. ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ಅಗತ್ಯವಿದ್ದಾಗಲೆಲ್ಲ ಒದಗಿಸಲು ತಂಡ ಸಿದ್ಧವಿದೆ.

ಮೂರೇ ದಿನದಲ್ಲಿ ವಸತಿ ನಿರ್ಮಾಣ:
ಆಶ್ರಯ ಸಮಿತಿ ಸದಸ್ಯ ರಾಜೇಶ್ ನೇತೃತ್ವದಲ್ಲಿ ಸ್ಥಳೀಯರಾದ ಶ್ಯಾಮ್, ಮಣಿ, ವಿನೋದ್, ಉಮೇಶ್, ಸಂತೋಷ್ ಕೋಟ್ಯಾನ್, ಮಂಜು, ನವೀನ್, ಶರವಣ್, ಕಿಶೋರ್, ನಾಗರಾಜ್, ಪ್ರದೀಪ್, ಸುಮಂತ್, ಪತ್ರಕರ್ತ ಪಿ.ರಾಜೇಶ್ ಮತ್ತಿತರ ಯುವಕರು ತಾವೇ ಸೇರಿಕೊಂಡು ಕೇವಲ ಮೂರೇ ದಿನದಲ್ಲಿ ಸೂರು ಸಿದ್ಧಪಡಿಸಿದ್ದಾರೆ. ನಗರ ಬಿಜೆಪಿ ಉಪಾಧ್ಯಕ್ಷ ಸಿ.ಟಿ.ಜಯವರ್ಧನ್, ಸಿಡಿಎ ಅಧ್ಯಕ್ಷ ಸಿ.ಆನಂದ್ ಅಗತ್ಯ ನೆರವು ಒದಗಿಸಿದ್ದರೆ, ಬಿಜೆಪಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ, ಸೂರು ಬಳಗದ ನೇತೃತ್ವ ವಹಿಸಿರುವ ಸೀತಾರಾಂ ಭರಣ್ಯ ಯುವಕರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ಸೋಮವಾರ ಬೆಳಗ್ಗೆ ಈ ಎಲ್ಲ ಮುಖಂಡರು ಸೇರಿ ಈ ವಾಸ್ತವ್ಯದಲ್ಲಿ ದೇವತಾ ಕಾರ್ಯ ಪೂರೈಸಿ ವೃದ್ಧೆಗೆ ಹಸ್ತಾಂತರಿಸಿದ್ದಾರೆ. ಅವರಿಗೆ ಅಗತ್ಯವಿರುವ ಹಾಸಿಗೆ, ಚಾಪೆ, ಬೆಡ್‍ಶೀಟ್, ಉಡುಗೆ-ತೊಡುಗೆಗಳನ್ನು ಕೂಡ ಯುವಕರು ಖರೀದಿಸಿ ನೀಡಿದ್ದಾರೆ.

ಯುವಕರಿಗೆ ಸ್ಫೂರ್ತಿ:
ಬಿಜೆಪಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸೀತಾರಾಂ ಭರಣ್ಯ ಮಾತನಾಡಿ, ಕರೊನಾ ಸಂಕಷ್ಟದ ನಡುವೆ ಬಡಾವಣೆಯ ಬಿಜೆಪಿ ಮುಖಂಡ ರಾಜೇಶ್ ಪಡಿತರ ಕಿಟ್ ನೀಡಲು ಬಂದಾಗ ಟಾರ್ಪಾಲಿನ್‍ನ ಆಸರೆಯಲ್ಲಿ ಮಳೆ ನೀರು, ಕೆಸರಿನ ನಡುವೆ ಮರಿಯಮ್ಮ ಅವರು ಇದ್ದುದನ್ನು ಗಮನಿಸಿದ್ದರು. ಆನಂತರ ಪಕ್ಕದಲ್ಲೇ ಅವರಿಗೆ ಸೂರು ನಿರ್ಮಿಸುವ ತೀರ್ಮಾನ ಕೈಗೊಂಡೆವು ಎಂದರು. ಆಶ್ರಯ ಸಮಿತಿ ಸದಸ್ಯ ರಾಜೇಶ್ ಮಾತನಾಡಿ, ಸಮಸ್ಯೆಯಲ್ಲಿದ್ದ ಅಜ್ಜಿಗೆ ಸೂರು ನಿರ್ಮಿಸಿ ನೀಡಿರುವ ತೃಪ್ತಿ ಇದೆ. ಲಾಕ್‍ಡೌನ್ ಸಂದರ್ಭ ಸೂರು ಬಳಗ ಅರ್ಥಪೂರ್ಣ ಕಾರ್ಯಕ್ಕೆ ಮೀಸಲಿಟ್ಟಿರುವುದು ಉತ್ತಮ ಚಿಂತನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net