೮೧ನೇ ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕೋತ್ಸವ

MDK04
Published on

ಮಡಿಕೇರಿ: ಕ್ವಿಟ್ ಇಂಡಿಯಾ ಚಳುವಳಿ ಭಾರತದ ಸ್ವಾತಂತ್ರ್ಯಕ್ಕೆ ಭದ್ರ ಬುನಾದಿ ಹಾಕಿದ ಜನಾಂದೋಲನ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.


ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ ೮೧ನೇ ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕ್ವಿಟ್ ಇಂಡಿಯಾ ಚಳುವಳಿ ಸಂಧರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಲ್ಲೇಂಗಡ ಚಂಗಪ್ಪನವರು ಮಡಿಕೇರಿ ಕೋಟೆಯಲ್ಲಿ ಯೂನಿಯನ್ ಜಾಕ್ ಧ್ವಜವನ್ನು ಕೆಳಗಿಳಿಸಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಬಂಧನಕ್ಕೆ ಒಳಗಾಗಿದ್ದರು. ಅದೇ ರೀತಿ ಈ ಚಳುವಳಿ ಮೂಲಕ ಭಾರತದ ಸ್ವಾತಂತ್ರ್ಯಕ್ಕೆ ಭದ್ರ ಬುನಾದಿ ಹಾಕಲಾಯಿತು ಎಂದರು.


ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮಹಾತ್ಮ ಗಾಂಧಿಯವರ ಮಾಡು ಇಲ್ಲವೇ ಮಡಿ ಎಂಬ ಕರೆಗೆ ಇಡೀ ದೇಶವೇ ಕೈಜೋಡಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಯಶಸ್ಸು ಕಂಡಿತು ಎಂದು ಹೇಳಿದರು.


ಹಿರಿಯ ಮುಖಂಡ ಟಿ.ಪಿ.ರಮೇಶ್ ಮಾತನಾಡಿ, ಮಹಾತ್ಮ ಗಾಂಧಿ, ಜವಹರಲಾಲ್ ನೆಹರು ಸೇರಿದಂತೆ ಕಾಂಗ್ರೆಸ್ ನಾಯಕರು ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿ ಬಂಧನಕ್ಕೆ ಒಳಗಾದರು. ನಂತರ ಇತರ ಕಾಂಗ್ರೆಸ್ ಮುಖಂಡರು ಹಾಗೂ ಸದಸ್ಯರು ದೇಶದ ರೈತರು, ಕಾರ್ಮಿಕರು ಸೇರಿದಂತೆ ಭಾರತೀಯ ನಾಗರೀಕರ ನೆರವಿನಿಂದ ಚಳುವಳಿ ಫಲಪ್ರದವಾದ ಕುರಿತು ವಿವರಣೆ ನೀಡಿದರು.


ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಡಿಸಿಸಿ ಉಪಾಧ್ಯಕ್ಷರಾದ ಕೊಕ್ಕಲೆರ ಸುಜು ತಿಮ್ಮಯ್ಯ, ಅಬ್ದುಲ್ ರೆಹಮಾನ್, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರಯ್ಯ ಅಬ್ರಾರ್, ಡಿ.ಸಿ.ಸಿ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net