

ಬೆಳಗಾವಿ: ರಸಗೊಬ್ಬರ ಕಳವು ಮಾಡಿದ್ದ ಐವರು ಆರೋಪಿಗಳನ್ನು ಗ್ರಾಮೀಣ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರಿಂದ 25,93,500 ರೂ. ಮೌಲ್ಯದ ಡಿಎಪಿ ರಸಗೊಬ್ಬರವಿದ್ದ 810 ಚೀಲ ಹಾಗೂ 2 ಟ್ರಕ್ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಹಾಲಗಿಮರಡಿಯ ನಾಗರಾಜ ಪಠಾತ, ಖಾನಾಪುರ ತಾಲೂಕಿನ ಲಕ್ಕೇಬೈಲ್ ಪಂಡಿತ ಕಲ್ಲಪ್ಪ ಸನದಿ, ಮಂಜುನಾಥ ಸೋಮಪ್ಪ ಹಮ್ಮನವರ, ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯ ವಾಸೀಂ ಇಸ್ಮಾಯಿಲ್ ಮಕಾನದಾರ್, ಹುದಲಿಯ ಗಜಬರಅಲಿ ಗೌಸ್‌ಮೋದ್ದೀನ್ ಜಿಡ್ಡಿಮನಿ ಬಂಧಿತರು.
ಮೇ 23ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದೇಸೂರ ರೈಲ್ವೆ ಸ್ಟೇಷನ್ ಹತ್ತಿರ ಗೂಡ್ಸ್ ಶೆಡ್ ಗೋದಾಮಿನಲ್ಲಿಟ್ಟಿದ್ದ 900 ಆರ್‌ಸಿಎಫ್ ಕಂಪನಿಯ ಡಿಎಪಿ ರಸಗೊಬ್ಬರದ ಚೀಲಗಳು ಕಳುವಾದ ಬಗ್ಗೆ ತಾಲೂಕಿನ ಹೊನಗಾದ ಶಿವಾಜಿ ಬಾಳಾರಾಮ ಆನಂದಾಚೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ ಹಾಂಡ, ಪಿಎಸ್‌ಐ ಮಂಜುನಾಥ ಹುಲಕುಂದ, ಎಎಸ್‌ಐ ಎಂ.ವಿ. ತಳವಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.