

ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರದಲ್ಲಿ ರೇಷ್ಮೆ ಇಲಾಖೆಗೆ ಸೇರಿದ 16 ಸಂಸ್ಥೆಗಳಿದ್ದು, ಒಟ್ಟು 81.06 ಎಕರೆ ಜಮೀನು ಇದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮಾಹಿತಿ ನೀಡಿದರು.
ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಜಮೀನು ಎಷ್ಟಿದೆ, ಬಳಕೆಯಲ್ಲಿ ಇಲ್ಲದ ಕಟ್ಟಡಗಳ ಬಳಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಚುಕ್ಕೆ ಗುರುತಿಲ್ಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಪ್ರಶ್ನೆಗೆ ಸಚಿವ ವೆಂಕಟೇಶ್ ಮೇಲಿನಂತೆ ಪ್ರತಿಕ್ರಿಯಿಸಿದರು.
ಸರ್ಕಾರಿ ರೇಷ್ಮೆ ಫಿಲೇಚರ್‌ಗಳಿಗೆ ಉತ್ತೇಜನ ನೀಡಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 1937 ರಿಂದ 1944ರ ನಡುವೆ ಕೊಳ್ಳೇಗಾಲ ಕ್ಷೇತ್ರದ ಮುಡಿಗುಂಡ, ಮಾಂಬಳ್ಳಿ, ಸಂತೇಮರಹಳ್ಳಿ ಹಾಗೂ ಚಾಮರಾಜನಗರದಲ್ಲಿ 5 ಸರ್ಕಾರಿ ರೇಷ್ಮೆ ಕಾರ್ಖಾನೆ ಸ್ಥಾಪಿಸಲಾಗಿದ್ದು, ಈ ಕಾರ್ಖಾನೆಗಳು ನಿರಂತರವಾಗಿ ನಷ್ಟದಲ್ಲಿ ನಡೆಯುತ್ತಿದ್ದ ಕಾರಣ 5 ಕಾರ್ಖಾನೆಗಳನ್ನು 2013 ಮತ್ತು ತದನಂತರದಲ್ಲಿ ಉಳಿದ ಕಾರ್ಖಾನೆಗಳ ಪ್ರಧಾನ ವ್ಯವಸ್ಥಾಪಕರು ಲೇ ಆಫ್ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ಈವರೆಗೆ ನೂಲು ಬಿಚ್ಚಾಣಿಕೆದಾರರಿಂದ ರೇಷ್ಮೆ ಖರೀದಿಸಲಾಗಿದೆಯೇ? ಖರೀದಿಸಿದ್ದಲ್ಲಿ ಯಾವ ದರದಲ್ಲಿ ಎಂಬ ಚುಕ್ಕೆ ಗುರುತಿಲ್ಲದ ಶಾಸಕರ ಪ್ರಶ್ನೆಗೆ, ರೇಷ್ಮೆ ಮಾರಾಟ ಮಂಡಳಿ ಸರ್ಕಾರದ ಒಂದು ಉದ್ಯಮ. ರೇಷ್ಮೆ ನೂಲು ಬೆಲೆ ಸ್ವೀಕರಣಕ್ಕಾಗಿ ಹಾಗೂ ರೇಷ್ಮೆ ಉದ್ದಿಮೆ ಅವಲಂಬಿಸಿರುವ ಬೆಳೆಗಾರರು ಮತ್ತು ನೂಲು ಬಿಚ್ಚಣಿಕೆದಾರರು ಮತ್ತು ಹುರಿಕಾರರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ 1979ರಲ್ಲಿ ಸ್ಥಾಪನೆಗೊಂಡಿರುವ ಏಕೈಕ ಸಂಸ್ಥೆ ಇದು. ಮಂಡಳಿಯು ಸ್ಥಾಪನೆಗೊಂಡ ವರ್ಷದಿಂದಲೂ ನೂಲು ಬಿಚ್ಚಾಣಿಕೆದಾರರಿಂದ ಕಚ್ಚಾ ರೇಷ್ಮೆಯನ್ನು ಖರೀದಿಸಲಾಗುತ್ತಿದೆ. 2023-2024ನೇ ಸಾಲಿನಲ್ಲಿ ಕೊಳ್ಳೇಗಾಲ, ರಾಮನಗರ, ಶಿಡ್ಲಘಟ್ಟ, ಬೆಂಗಳೂರು (ಕೊಳ್ಳೇಗಾಲ ಶಾಖೆ) ಗಳಿಂದ ಒಟ್ಟು 49,90,660 ಕೆಜಿ ರೇಷ್ಮೆ ನೂಲನ್ನು ಮಂಡಳಿ ಖರೀದಿಸಿದೆ ಎಂದು ಉತ್ತರಿಸಿದರು.
ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಚಾಕಿ ಸಾಕಣೆಯನ್ನು ಮತ್ತೆ ಪ್ರಾರಂಭಿಸಲು ಇರುವ ತೊಡಕುಗಳೇನು, ತೊಡಕುಗಳನ್ನು ನಿವಾರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂಬ ಪ್ರಶ್ನೆಗೆ, ಕೊಳ್ಳೇಗಾಲದಲ್ಲಿ ಹಾಲಿ ವಾರ್ಷಿಕ 6ರಿಂದ 7 ಸಾವಿರ ಮೊಟ್ಟೆ ಚಾಕಿ ಮಾಡಿ ಬೆಳೆಗಾರರಿಗೆ ವಿತರಿಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಚಾಕಿ ಮಾಡಿ ವಿತರಿಸಲು ಹಿಪ್ಪು ನೇರಳೆ ತೋಟ ವಿಸ್ತರಣೆ, ಸಲಕರಣೆ, ಕಟ್ಟಡ ದುರಸ್ತಿಗೆ ಅಂದಾಜು 15 ಲಕ್ಷ ರೂ. ಅನುದಾನ ಅವಶ್ಯವಿದ್ದು, ಪ್ರಸ್ತುತ ವರ್ಷದಲ್ಲಿ ಅನುದಾನ ಬಿಡುಗಡೆಗೊಳಿಸಿ ಬೆಳೆಗಾರರಿಗೆ ಅನುಕೂಲವಾಗುವಂತೆ ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ ಇದನ್ನು ಮಾಹೆಯಲ್ಲಿ 5 ಸಾವಿರದಂತೆ ಚಾಕಿ ಮಾಡಿಕೊಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.