ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಹುಡುಗನಿಗೆ 804ನೇ ರ‌್ಯಾಂಕ್

Screenshot_2024-04-17-19-23-18-21.jpg
Published on

ಬೆಳಗಾವಿ: ತಾಲೂಕಿನ ಕಲಕಾಂಬ ಗ್ರಾಮದ ರಾಹುಲ್ ಪಾಟೀಲ ಎಂಬ ಯುವಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ 804 ರ‌್ಯಾಂಕ್ ಪಡದಿದ್ದು, ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ರಾಹುಲ್ ಅವರು, ಒಂದೂವರೆ ವರ್ಷದಿಂದ ದೆಹಲಿಯಲ್ಲಿ ಕೋಚಿಂಗ್ ಪಡೆಯುತ್ತಿದ್ದು, ಐದನೇ ಯತ್ನದಲ್ಲಿ ಸಫಲತೆ ಕಂಡಿದ್ದಾರೆ. ಅವರ ಸಾಧನೆಗೆ ಇಡೀ ಊರೇ ಸಂಭ್ರಮ ಪಡುತ್ತಿದೆ. ಯುಪಿಎಸ್ ಪರೀಕ್ಷೆಯಲ್ಲಿ 804 ರ‌್ಯಾಂಕ್ ಗಳಿಸಿರುವ ರಾಹುಲ್‌ಗೆ ಈ ಫಲಿತಾಂಶ ಸಮಾಧಾನ ತಂದಿಲ್ಲ. 100 ರ‌್ಯಾಂಕ್‌ನೊಳಗೆ ಸ್ಥಾನ ಗಿಟ್ಟಿಸಿಕೊಂಡು ಜಿಲ್ಲಾಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದಾನೆ. ತಂದೆ ಜಯವಂತ ಬಿ.ಎಸ್ಸಿ ಪದವೀಧರರಾಗಿದ್ದು, ಕೃಷಿ ಮಾಡುತ್ತಿದ್ದಾರೆ. ತಾಯಿ ಸುರೇಖಾ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದಿದ್ದು, ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಆರ್ಥಿಕವಾಗಿ ಮಧ್ಯಮ ವರ್ಗದ ಕುಟುಂಬ ಇದಾಗಿದೆ.

 ಈಗ ನನಗೆ ಸಿಕ್ಕ ರ‌್ಯಾಂಕಿಂಗ್ ಪ್ರಕಾರ ಐಎಎಸ್ ದರ್ಜೆ ಹುದ್ದೆ ಸಿಗುವ ಸಾಧ್ಯತೆ ಕಡಿಮೆ. ಹಾಗಾಗಿ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ನನಸಾಗಿಸಲು, ಯುಪಿಎಸ್‌ಸಿ ನಡೆಸುವ ಪರೀಕ್ಷೆಯನ್ನು ಮತ್ತೆ ಬರೆದು ರ‌್ಯಾಂಕಿಂಗ್ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಈಗ ದೊರೆಯುವ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ, ಬಡಜನರ ಬದುಕು ಸುಧಾರಣೆಗೆ ಒತ್ತು ಕೊಡುತ್ತೇನೆ. ಯಾವುದೇ ಪರೀಕ್ಷೆಯಲ್ಲಿ ಒಮ್ಮೆ ವಿಫಲವಾಗಿದ್ದಕ್ಕೆ ಅಭ್ಯರ್ಥಿಗಳು ಪ್ರಯತ್ನ ಕೈಬಿಡಬಾರದು. ಗುರಿ ಮುಟ್ಟುವವರೆಗೂ ವಿಶ್ವಾಸ ಉಳಿಸಿಕೊಂಡು ಮುನ್ನಡೆಯಬೇಕು ಎಂದು ರಾಹುಲ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net