

ಬೀರೂರು: ಮಕ್ಕಳು ವೃತ್ತಿಪರ ವಿಷಯಗಳ ಅಧ್ಯಯನಕ್ಕೆ ಮಾತ್ರ ಆದ್ಯತೆ ನೀಡದೆ ಸಮಾಜದ ತಿಳಿವಳಿಕೆ ನೀಡುವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳ ಬಗ್ಗೆಯೂ ಗಮನಹರಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಕಿವಿಮಾತು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 80 ಲಕ್ಷ ರೂ. ವೆಚ್ಚದ ನಾಲ್ಕು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣದ ಬಗ್ಗೆ ಗ್ರಾಮೀಣ ಮಕ್ಕಳೂ ಹೆಚ್ಚು ಆಸಕ್ತಿ ವಹಿಸುತ್ತಿರುವುದರಿಂದ ಕಲಾ ಹಾಗೂ ವಾಣಿಜ್ಯ, ವಿಜ್ಞಾನ ಮೊದಲಾದ ವಿಷಯಗಳನ್ನು ಬೋಧಿಸುವ ಕಾಲೇಜುಗಳು ಒಂದು ಬಗೆಯಲ್ಲಿ ವಿದ್ಯಾರ್ಥಿ ಕೊರತೆ ಎದುರಿಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಜತೆಗೆ ಬ್ಯಾಂಕ್, ವಿಮೆ, ರೈಲ್ವೆ, ಐಎಎಸ್, ಐಪಿಎಸ್, ಐಎಫ್‌ಎಸ್ ರೀತಿಯ ಸರ್ಕಾರಿ ಉದ್ಯೋಗಗಳಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಪರಿಣಾಮವಾಗಿ ಹೊರರಾಜ್ಯಗಳ ವಿದ್ಯಾರ್ಥಿಗಳು ಈ ರಂಗಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ವಿದ್ಯಾರ್ಥಿಗಳೂ ಇತ್ತ ಆಸಕ್ತಿ ವಹಿಸಿದರೆ ಭವಿಷ್ಯ ಉಜ್ವಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಕಟ್ಟಡ ನಿರ್ಮಾಣದ ಜತೆ ಕಾಲೇಜಿಗೆ ಹೊಂದಿಕೊಂಡಂತಿರುವ ಕೆಎಲ್‌ಕೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕ್ರೀಡಾಂಗಣ ನಿರ್ಮಿಸುವ ಉದ್ದೇಶವಿದೆ. ಈಗಾಗಲೇ 35 ಲಕ್ಷ ರೂ. ವೆಚ್ಚದಲ್ಲಿ ಕೆಎಲ್‌ಕೆ ಮೈದಾನದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಮುಂದಾಗಿದ್ದು, ಮೂಲ ಸೌಕರ್ಯ ಹಾಗೂ ಕಾಲೇಜು ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮುಬಾರಕ್ ಮಾತನಾಡಿ, ಕಡೂರು ಕಾಲೇಜಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿಯೇ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಮನವೊಲಿಸುವ, ಲಭ್ಯ ವಿಷಯಗಳ ಬೋಧನೆ ಆರಂಭಕ್ಕೆ ಸಹಕರಿಸಿ ನೆರವಾಗಬೇಕು. ಕಾಲೇಜಿಗೆ ಅಗತ್ಯವಿರುವ ಸಭಾಂಗಣ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರಭಾರ ಪ್ರಾಂಶುಪಾಲ ಮಲ್ಲಿಕಾರ್ಜುನ್, ಮಾಜಿ ಪ್ರಭಾರ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ರಾಜು, ಲೋಕೇಶಪ್ಪ, ಮಾನಿಕ್ ಬಾಷಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಕಾಲೇಜು ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ಇದ್ದರು.