80 ಲಕ್ಷ ರೂ. ವೆಚ್ಚದಲ್ಲಿ ನಿಸರಾಣಿ ಶಾಲೆಗೆ ಬಿಇಎಲ್ ಮೆರುಗು

22sor1 web
Published on

ಸೊರಬ: ನಗರ ಪ್ರದೇಶಗಳ ಖಾಸಗಿ ಶಾಲೆಗಳು ನಾಚುವಂತೆ ಸರ್ಕಾರಿ ಶಾಲೆ ನಿರ್ಮಾಣವಾಗಿದ್ದು ಶಾಲೆಯನ್ನು ಸೂಕ್ತವಾಗಿ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ಗ್ರಾಮದ ಪ್ರತಿಯೊಬ್ಬರ ಮೇಲಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಶುಕ್ರವಾರ ತಾಲೂಕಿನ ನಿಸರಾಣಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಮಂತ್ರಾಲಯದ ಅಧೀನದ ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್)ನ ಸಾಂಸ್ಥಿಕ ಹೊಣೆಗಾರಿಕೆ ಯೋಜನೆಯಡಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ನಿಸರಾಣಿ ಗ್ರಾಮದ ಸರ್ಕಾರಿ ಶಾಲೆಯು ತಾಲೂಕಿನಲ್ಲಿ ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಖಾಸಗಿ ಶಾಲೆಗಳು ನಾಚಿಸುವಷ್ಟು ಸುಸಜ್ಜಿತ ಪ್ರತ್ಯೇಕ ಕೊಠಡಿಗಳು, ವಿದ್ಯುತ್ ಸಂಪರ್ಕ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಗೃಹ ಸೇರಿದಂತೆ ಮೂಲ ಸೌಕರ್ಯಗಳನ್ನು ಬಿಇಎಲ್ ಸಂಸ್ಥೆಯಿಂದ ಕಲ್ಪಿಸಲಾಗಿದೆ. ಶಾಲೆಗೆ ಅವಶ್ಯವಿರುವ ರಂಗಮಂದಿರ, ಕಾಂಪೌಂಡ್ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು. ಶಾಲೆಯನ್ನು ಬಿಇಎಲ್ ಸರ್ಕಾರಿ ಮಾದರಿ ಶಾಲೆ ಎಂದು ದಾಖಲೆಗಳಲ್ಲಿ ಮರುನಾಮಕರಣ ಮಾಡಲು ಸ್ಥಳದಲ್ಲಿದ್ದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.

ಬಿಇಎಲ್ ಸಂಸ್ಥೆಯ ನಿವೃತ್ತ ಅಧಿಕಾರಿ ಎಂ.ಶ್ರೀನಿವಾಸ ಹೆಗಡೆ ನಿಸರಾಣಿ ಮಾತನಾಡಿ, ದೇಶದ ರಕ್ಷಣಾ ಕ್ಷೇತ್ರದಲ್ಲಿ ಬಿಇಎಲ್ ಸಂಸ್ಥೆ ಅದ್ವಿತೀಯ ಕೊಡುಗೆಗಳನ್ನು ನೀಡುತ್ತಿದೆ. ಸಂಸ್ಥೆಯು ಸಿಬ್ಬಂದಿಯಿಂದ ದೊರೆತ ಲಾಭಾಂಶದ ಸಾಂಸ್ಥಿಕ ಹೊಣೆಗಾರಿಕೆ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಶಾಲೆಗಳ ಕಟ್ಟಡಗಳನ್ನು ನಿರ್ಮಿಸಿಕೊಡುತ್ತಿದೆ. ನಿಸರಾಣಿ ಗ್ರಾಮದ ಶಾಲಾ ಕಟ್ಟಡವನ್ನು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಪೀಠೋಪಕರಣಗಳನ್ನು ಸಹ ಒದಗಿಸಲಾಗುವುದು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳಿಗೆ ಏರಬೇಕು ಎಂದರು.

ನಾನು ಸಹ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದು, 25 ವರ್ಷ ಬಿಇಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ್, ಬಿಇಎಲ್ ಜನರಲ್ ಮ್ಯಾನೇಜರ್ ಬಿ.ಪಿ.ಪಹುಜಾ, ಎಜಿಎಂ ಸಿ.ಸಂತೋಷ್ ಕುಮಾರ್, ಡಿಜಿಎಂ ಡಾ. ಶಶಿಭೂಷಣ್, ಸೀನಿಯರ್ ಇಂಜಿನಿಯರ್ ಭುವನೇಂದ್ರ ಸ್ವಾಮಿ, ಡೆಪ್ಯೂಟಿ ಇಂಜಿನಿಯರ್ ಕೈಲಾಸ್, ಗ್ರಾಪಂ ಅಧ್ಯಕ್ಷ ಬಿ.ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net