

ಮಡಿಕೇರಿ:
ಪ್ರಸಿದ್ಧ ಪ್ರವಾಸಿತಾಣ ಮಡಿಕೇರಿ ರಾಜಾಸೀಟ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿದೆ. ಮೂರು ದಿನಗಳಲ್ಲಿ ಸುಮಾರು ೮೦ ಸಾವಿರ ಜನ ಈ ಪ್ರದರ್ಶನ ವೀಕ್ಷಿಸಿರುವುದಾಗಿ ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜಾಸೀಟ್ ಉದ್ಯಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ತೊಟಗಾರಿಕೆ ಇಲಾಖೆ ಯೋಜನೆ ಸಿದ್ಧಪಡಿಸಿದ್ದು, ವರ್ಷಪೂರ್ತಿ ಜೀವಂತಿಕೆಯಿಂದ ಇರುವ ರೀತಿಯಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯಲು ಚಿಂತಿಸಲಾಗಿದೆ.
ಸಾಮಾನ್ಯವಾಗಿ ಮಡಿಕೇರಿ ರಾಜಾಸೀಟ್‌ನಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯುತ್ತಿದ್ದ ಫಲ-ಪುಷ್ಪ ಪ್ರದರ್ಶನ ಈ ಬಾರಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜ.೨೬ರಿಂದ ಜ. ೨೮ರ ತನಕ ಆಯೋಜಿಸಲಾಗಿತ್ತು. ಜ.೨೬ರ ಶುಕ್ರವಾರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಜೆ, ಶನಿವಾರ ತಿಂಗಳ ನಾಲ್ಕನೇ ಶನಿವಾರದ ರಜೆ ಹಾಗೂ ಭಾನುವಾರ ವಾರದ ರಜೆ ಇದ್ದ ಕಾರಣ ಮೂರು ದಿನವೂ ಫಲ ಪುಷ್ಪ ಪ್ರದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರು ಹರಿದು ಬಂದಿದ್ದರು.
ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ಮೂರು ದಿನಗಳ ಪ್ರದರ್ಶನ ವೇಳೆ ಉದ್ಯಾನಕ್ಕೆ ಸುಮಾರು ೮೦ ಸಾವಿರ ಜನ ಭೇಟಿ ಕೊಟ್ಟಿದ್ದರು. ೨೦ ರೂ. ಪ್ರವೇಶದರ ನಿಗದಿ ಪಡಿಸಿದ್ದರಿಂದ ೧೨-೧೫ ಲಕ್ಷ ರೂ.ಗಳ ಆದಾಯ ಇಲಾಖೆಗೆ ಬಂದಿರುವ ಅಂದಾಜು ಮಾಡಲಾಗಿದೆ. ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಆಗಿದ್ದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಪ್ರತಿಕೃತಿ ಸಾಕಷ್ಟು ಪ್ರವಾಸಿಗರು ಮಾತ್ರವಲ್ಲದೆ ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಯಿತು. ೧೫ ಅಡಿ ಎತ್ತರ, ೪೮ ಅಡಿ ಉದ್ದ, ೨೮ ಅಡಿ ಅಗಲದಲ್ಲಿ ನಿರ್ಮಿಸಲಾಗಿದ್ದ ಈ ಪ್ರತಿಕೃತಿಗೆ ಗುಲಾಬಿ, ಸೇವಂತಿಗೆ, ಆಸ್ಟರ್ ಸೇರಿದಂತೆ ವಿವಿಧ ಬಣ್ಣದ ಸುಮಾರು ೬ ಲಕ್ಷ ಹೂವುಗಳನ್ನು ಬಳಸುವ ಮೂಲಕ ಆಕರ್ಷಣೀಯಗೊಳಿಸಲಾಗಿತ್ತು.
ಫಲಪುಷ್ಪ ಪ್ರದರ್ಶನ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಗಾಂಧಿ ಮೈದಾನದಲ್ಲಿ ವಿವಿಧ ಮಳಿಗೆಗಳನ್ನೂ ತೆರೆಯಲಾಗಿತ್ತು. ಹೂವು, ಹಣ್ಣು, ಸಾಂಬಾರ ಪದಾರ್ಥಗಳ ಗಿಡಗಳ ಮಾರಾಟ, ಕೃಷಿ ಉಪಕರಣಗಳ ಮಾರಾಟಕ್ಕೆ ಇಲ್ಲಿ ಅವಕಾಶ ಕೊಡಲಾಗಿತ್ತು. ಇಲ್ಲಿಯೂ ಭರ್ಜರಿಯಾಗಿ ವ್ಯಾಪಾರ ನಡೆದಿರುವ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು ೧೦ ಬಗೆ ಹಲಸು ಸೇರಿದಂತೆ ವೈವಿಧ್ಯಮಯ ಗಿಡಗಳು ಇಲ್ಲಿ ಲಭ್ಯವಿದ್ದವು.
ಇತ್ತೀಚೆಗೆ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಮೆಕಡಾಮಿಯಾ ಗಿಡಗಳ ಮಾರಾಟಕ್ಕೂ ಇಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಡ್ರೈಫ್ರೂಟ್ ಆಗಿ ಬಳಸುವ ಮೆಕಡಾಮಿಯಾಕ್ಕೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದ್ದು, ಬೆಲೆಯೂ ಹೆಚ್ಚಾಗಿದೆ. ಹಾಗಾಗಿ ಆಸಕ್ತ ಕೃಷಿಕರು ದೊಡ್ಡ ಸಂಖ್ಯೆಯಲ್ಲಿ ಮೆಕಡಾಮಿಯಾ ಗಿಡಗಳನ್ನು ಖರೀದಿ ಮಾಡಿದ್ದಾರೆ. ಸಾಂಬಾರ ಪದಾರ್ಥಗಳ ಗಿಡಗಳನ್ನು ಪ್ರದರ್ಶನಕ್ಕೆ ಭೇಟಿ ಕೊಟ್ಟವರು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಕಂಡುಬಂದ ಪ್ರತಿಕ್ರಿಯೆ ಗಮನಿಸಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರಾಜಾಸೀಟ್ ಉದ್ಯಾನವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲು ಚಿಂತನೆ ನಡೆಸಿದ್ದಾರೆ. ವರ್ಷದ ಎಲ್ಲಾ ದಿನಗಳಲ್ಲೂ ಇಲ್ಲಿ ಹೂವು ಅರಳಿ ನಳನಳಿಸುವಂತೆ ಮಾಡಲು ವೈಜ್ಞಾನಿಕ ತೋಟಗಾರಿಕೆಗೆ ಯೋಜನೆ ರೂಪಿಸಲಾಗುತ್ತಿದೆ. ಋತುಮಾನಕ್ಕೆ ಅನುಗುಣವಾಗಿ ಅರಳುವ ಹೂವುಗಳನ್ನು ಆಯಾಯ ಋತುಗಳಲ್ಲಿ ಅರಳುವಂತೆ ನೋಡಿಕೊಳ್ಳುವ ಮೂಲಕ ಶಾಶ್ವತ ಹೂವಿನ ಲೋಕವೊಂದರ ಸೃಷ್ಟಿಗೆ ತೊಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದ್ದು, ವರ್ಷದ ಎಲ್ಲಾ ದಿನಗಳಲ್ಲೂ ರಾಜಾಸೀಟ್‌ಗೆ ಪ್ರವಾಸಿಗರನ್ನು ಆಕರ್ಷಿಸಲು ಯೋಜಿಸಲಾಗಿದೆ.
ಈ ವರ್ಷ ರಾಜಾಸೀಟ್ ಫಲಪುಷ್ಪ ಪ್ರದರ್ಶನ ಏಕತಾನತೆಯಿಂದ ಕೂಡಿತ್ತು ಎನ್ನುವ ಆಕ್ಷೇಪದ ಮಾತುಗಳೂ ಕೇಳಿಬರುತ್ತಿದೆ. ಪ್ರತಿ ವರ್ಷ ಒಂದೇ ರೀತಿಯಲ್ಲಿ ಪ್ರದರ್ಶನ ನಡೆದರೆ ಅದನ್ನು ವೀಕ್ಷಿಸಲು ಖುಷಿ ಅನ್ನಿಸುವುದಿಲ್ಲ ಎನ್ನುತ್ತಾರೆ ಪುಷ್ಪ ಪ್ರಿಯರು. ಈ ಫಲಪುಷ್ಪ ಪ್ರದರ್ಶನಕ್ಕೆಂದು ಪ್ರತಿ ವರ್ಷ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತದೆ. ಆದರೆ ಯಾವುದೇ ಹೊಸತನ ಕಂಡುಬರುವುದಿಲ್ಲ. ಈ ವರ್ಷ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಪ್ರತಿಕೃತಿ ಇರದಿದ್ದರೆ ಪುಷ್ಪ ಪ್ರದರ್ಶನವೇ ಸಂಪೂರ್ಣ ಸಪ್ಪೆಯಾಗುತ್ತಿತ್ತು. ಕೊಡಗಿನ ಪ್ರತಿ ಮನೆಗಳಲ್ಲೂ ಸಾಮಾನ್ಯವಾಗಿ ಪುಟ್ಟ ಹೂವಿನ ತೋಟಗಳು ಇರುತ್ತದೆ. ಪುಷ್ಪ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಂಥವರು ಪ್ರತಿ ವರ್ಷದ ಪುಷ್ಪ ಪ್ರದರ್ಶನಕ್ಕೂ ತಪ್ಪದೇ ಭೇಟಿ ಕೊಡುತ್ತಾರೆ. ಹಾಗಾಗಿ ರಾಜಾಸೀಟ್‌ಗೆ ಬರುವ ಪ್ರವಾಸಿಗರಿಗೆ ಇಂಥ ಪ್ರದರ್ಶನಗಳು ಆಕರ್ಷಕ ಅನ್ನಿಸಬಹುದು. ಆದರೆ ವರ್ಷದಿಂದ ವರ್ಷಕ್ಕೆ ಹೊಸತನ ಅಳವಡಿಸಿಕೊಳ್ಳದಿದ್ದರೆ ಸ್ಥಳೀಯರಿಗೆ ನೀರಸ ಎನ್ನುವಂತೆ ಕಂಡುಬರುತ್ತದೆ. ಈ ವರ್ಷವೂ ಆಗಿದ್ದು ಇದೇ. ಮುಂದಿನ ವರ್ಷದಿಂದಾದರೂ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನದಲ್ಲಿ ಸೃಜನಶೀಲತೆ ಪ್ರದರ್ಶಿಸಲಿ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ರಾಜಾಸೀಟ್ ಫಲಪುಷ್ಪ ಪ್ರದರ್ಶನ ಪ್ರತಿ ವರ್ಷವೂ ಒಂದೇ ಥರ ಇರುವುದರಿಂದ ಅಂತಹ ಖುಷಿ ಅನಿಸಲಿಲ್ಲ. ಇಲಾಖೆ ಲಕ್ಷಗಟ್ಟಲೆ ಖರ್ಚು ಮಾಡುವುದರಿಂದ ನಮ್ಮ ನಿರೀಕ್ಷೆಗಳು ಜಾಸ್ತಿ ಇರುತ್ತವೆ. ಹಾಗಾಗಿ ಮುಂದಿನ ವರ್ಷ ಇದರಲ್ಲಿ ಉತ್ತಮ ಅಭಿರುಚಿ ಇರುವ ಪರಿಣಿತರ ಸಲಹೆಯೊಂದಿಗೆ ಹೊಸತನದ ಪ್ರಯೋಗಗಳನ್ನು ಮಾಡಿದರೆ ಒಳ್ಳೆಯದು.
ಕೆದಂಬಾಡಿ ಕಾಂಚನಾ, ಉಪನ್ಯಾಸಕಿ, ಮಡಿಕೇರಿ
ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವರ್ಷದ ಎಲ್ಲಾ ದಿನಗಳಲ್ಲೂ ಪುಷ್ಪ ಪ್ರದರ್ಶನದಂತಹ ವಾತಾವರಣ ರಾಜಾಸೀಟ್‌ನಲ್ಲಿ ಕಂಡು ಬರುವಂತೆ ಮಾಡುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಯೋಜನೆ ರೂಪಿಸಲಾಗುತ್ತಿದೆ. ಎಲ್ಲಾ ಕಾಲಗಳಲ್ಲೂ ಆಯಾಯ ಋತುಗಳಿಗೆ ಸರಿಯಾಗಿ ಅರಳುವ ಹೂವಿನ ಗಿಡಗಳನ್ನು ನೆಡಲಾಗುವುದು. ಉದ್ಯಾನಕ್ಕೆ ಜೀವಂತಿಗೆ ಇರುವಂತೆ ನೋಡಿಕೊಳ್ಳಲಾಗುವುದು. ಬೇರೆ ಬೇರೆ ಆಕರ್ಷಣೆಗಳನ್ನು ವ್ಯವಸ್ಥೆ ಮಾಡಲಾಗುವುದು.
ಎಚ್.ಆರ್. ಯೋಗೇಶ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಕೊಡಗು
ಫಲಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿತ್ತು. ಹೂವಿನ ಲೋಕವೇ ರಾಜಾಸೀಟ್‌ಗೆ ಇಳಿದು ಬಂದಂತೆ ಕಂಡುಬಂತು. ಇಂಥ ಪ್ರದರ್ಶನ ಇಲ್ಲಿ ವರ್ಷ ಪೂರ್ತಿ ಇರಬೇಕು. ವಿಶೇಷ ಸಂದರ್ಭಗಳಲ್ಲಿ ರಾಜಾಸೀಟ್ ಆಕರ್ಷಕವಾಗಿ ಕಾಣುವಂತೆ ಮಾಡಬೇಕು. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ