

ಬೆಳಗಾವಿ: ಕೆಎಲ್ಇ ಗ್ರಾಜುವೇಟ್ ಸ್ಕೂಲ್ ಆಫ್ ಹೋಟೆಲ್ ಮಾನೇಜ್ಮೆಂಟ್ ಆ್ಯಂಡ್ ಕ್ಯಾಟರಿಂಗ್ ಟೆಕ್ನಾಲಜಿ ವಿದ್ಯಾರ್ಥಿಗಳು ಒಂದೇ ದಿನದಲ್ಲಿ 8 ಸಿರಿಧಾನ್ಯಗಳಿಂದ 201 ಆಹಾರ ಪದಾರ್ಥ ತಯಾರಿಸಿ, ಚೆನ್ನೆನ ಕಲಾಂ ವರ್ಲ್ಡ್ ರೆಕಾರ್ಡ್ಗೆ ಭಾಜನವಾಗಿದೆ.
ಸಿರಿಧಾನ್ಯಗಳಾದ ನವಣಿ, ಬರಗು, ರಾಗಿ, ಸಾವೆ, ಜೋಳ, ಸಜ್ಜೆ, ಹಾರಕೆ ಅಕ್ಕಿ ಮತ್ತು ಊದಲು ಧಾನ್ಯದಿಂದ ಇಷ್ಟೊಂದು ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ, ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಕಾಲೇಜಿನ 60ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಾವು ತಯಾರಿಸಿದ ಸೂಪ್, ಸಿಹಿ ತಿಂಡಿ, ಕಾರದ ತಿನಿಸು, ಸಲಾಡ್, ಅಂಬಲಿ ಇತ್ಯಾದಿ ಆಹಾರ ಪದಾರ್ಥಗಳನ್ನು ತಯಾರಿಸಿ, ಜೆಎನ್ಎಂಸಿ ಜಿರಗೆ ಸಭಾಂಗಣದಲ್ಲಿ ಶನಿವಾರ ಪ್ರದರ್ಶನಕ್ಕಿಟ್ಟಿದ್ದರು.
ಚೆನ್ನೆನ ಕಲಾಂ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಮುಖ್ಯ ನಿರ್ಣಾಯಕರಾಗಿ ಆಗಮಿಸಿದ್ದ ಡಾ. ಐಗಿರಿ ಲೋಕೇಶ್ (ಸಿಇಒ), ಡಾ. ಆರ್.ಹರೀಶ ಅವರು, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳದಲ್ಲೇ ಸಂಸ್ಥೆಯಿಂದ ಅಧಿಕೃತವಾಗಿ ಅವಾರ್ಡ್ ೂಷಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಎಲ್ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಎ. ಕೋಠಿವಾಲೆ ಮಾತನಾಡಿ, ಕೆಎಲ್ಇ ಆಸ್ಪತ್ರೆಗಳು ಜನರ ಆರೋಗ್ಯದ ಕಾಳಜಿ ವಹಿಸುತ್ತಿವೆ. ಜನರ ಸದೃಢ ಆರೋಗ್ಯದ ದೃಷ್ಟಿಯಿಂದ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ಗಳನ್ನು ಆರಂಭಿಸಿ, ಆಹಾರದ ಜಾಗೃತಿ ಮೂಡಿಸಲಾಗುತ್ತಿದೆ. ಸಿರಿಧಾನ್ಯ ಸೇವನೆಯಿಂದ ಹೃದಯ ರೋಗ, ಥೈರಾಡ್ ಸೇರಿ ಇತರ ರೋಗಗಗಳು ಬರುವುದಿಲ್ಲ.
ಜತೆಗೆ ಮನುಷ್ಯನ ಒತ್ತಡ ನಿವಾರಣೆ ಮಾಡುತ್ತವೆ ಎಂದು ತಿಳಿಸಿದರು. ಪ್ರಾಚಾರ್ಯ ನಂದಕುಮಾರ್, ಕೆಎಲ್ಇ ವಿಶ್ವವಿದ್ಯಾಲಯದ ಡೆಪ್ಯೂಟಿ ರಿಜಿಸ್ಟ್ರಾರ್ ಡಾ.ಎಂ.ಎಸ್.ಗಣಾಚಾರಿ ಉಪಸ್ಥಿತರಿದ್ದರು. ಪ್ರದರ್ಶನದಲ್ಲಿ ತರಹೇವಾರಿ ತಿನಿಸು, ಫಾಸ್ಟ್ಫುಡ್, ಬೇಕರಿ ಪದಾರ್ಥಗಳೂ ಇದ್ದವು.