8 ತಿಂಗಳ ಅವಧಿಯಲ್ಲಿ 3.14 ಲಕ್ಷ ರೂ. ಸಂಗ್ರಹ

06 HANUR 4
Published on

ಹನೂರು: ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದೇಗುಲದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 8 ತಿಂಗಳ ಅವಧಿಯಲ್ಲಿ 3.14 ಲಕ್ಷ ರೂ. ಸಂಗ್ರಹವಾಗಿದೆ.

ದೇಗುಲ ಪ್ರಾಂಗಣದಲ್ಲಿ ಬೆಳಗ್ಗೆ 11ಕ್ಕೆ ಉಪ ತಹಸೀಲ್ದಾರ್ ಸುರೇಖಾ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಎಣಿಕೆ ಕಾರ್ಯವನ್ನು ಪ್ರಾರಂಭಿಸಿ ಸಂಜೆ 4.45ಕ್ಕೆ ಮುಕ್ತಾಯಗೊಂಡಿತು.

ವಿಷ ಪ್ರಸಾದ ದುರಂತ ಪ್ರಕರಣ ನಡೆದಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಒಂದು ವರ್ಷದ ಕಾಲ ದೇಗುಲದ ಬಾಗಿಲು ಮುಚ್ಚಲಾಗಿತ್ತು. ನಂತರದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇಗುಲಕ್ಕೆ ಭೇಟಿ ನೀಡಿದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯ ರೂಪದಲ್ಲಿ ಹಣವನ್ನು ಹುಂಡಿಗೆ ಹಾಕಿದ್ದರು. ಕಳೆದ ಜುಲೈ 14 ರಂದು ನಡೆದ ಹುಂಡಿ ಎಣಿಕೆಯಲ್ಲಿ 3,09,950 ರೂ. ಸಂಗ್ರಹವಾಗಿತ್ತು. ಗುರುವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ 3,14,245 ರೂ. ಸಂಗ್ರಹವಾಗಿದೆ. ಇದು ದುರಂತ ಪ್ರಕರಣದ ನಂತರ ನಡೆದ 4ನೇ ಹುಂಡಿ ಎಣಿಕೆಯಾಗಿದೆ.

ಎಣಿಕೆ ವೇಳೆ ಆರ್‌ಐ ಶಿವಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ನೀಲಕಂಠ, ಗ್ರಾಮ ಆಡಳಿತ ಅಧಿಕಾರಿಗಳಾದ ವಿನೋದ್, ರಾಜು, ಪ್ರಸಾದ್, ಶಿವಕುಮಾರಸ್ವಾಮಿ, ಕೆಜಿಬಿ ಬ್ಯಾಂಕ್ ಸಹ ವ್ಯವಸ್ಥಾಪಕ ಸುಹಾಸ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net