8 ತಾಸಿನಲ್ಲಿ 29 ಸಾವಿರ ಲೀಟರ್ ಮದ್ಯ ಮಾರಾಟ

4KMT3
Published on

ಕಾರವಾರ: ಲಾಕ್​ಡೌನ್ ಸಮಯದಲ್ಲೂ ಮದ್ಯದ ಅಂಗಡಿಗಳ ಬಾಗಿಲು ತೆರೆದಿದ್ದು, ಕುಡುಕರಿಗೆ ಭಾಗ್ಯದ ಬಾಗಿಲು ತೆರೆದಂತಾಗಿದೆ. ಜಿಲ್ಲೆಯಲ್ಲಿ 8 ತಾಸಿನಲ್ಲಿ 29 ಸಾವಿರ ಲೀಟರ್ ಮದ್ಯ ಮಾರಾಟವಾಗಿದೆ.

76 ಖಾಸಗಿ ವೈನ್ ಶಾಪ್​ಗಳು ಹಾಗೂ 16 ಎಂಎಸ್​ಐಎಲ್ ಶಾಪ್​ಗಳಿಗೆ ಅಬಕಾರಿ ಇಲಾಖೆ ಅನುಮತಿ ನೀಡಿತ್ತು. ಸೋಮವಾರ ಬೆಳಗ್ಗೆ 9 ಗಂಟೆಗೆ ಅಂಗಡಿಗಳ ಬಾಗಿಲು ತೆರೆಯಬೇಕಿತ್ತು. ಆದರೆ, ಅದಕ್ಕೆ ಒಂದು ತಾಸಿಗೂ ಮುಂಚೆ ಅಂಗಡಿಗಳ ಎದುರು ಜನ ಸರದಿಯಲ್ಲಿ ನಿಂತಿದ್ದರು.

ಮದ್ಯದ ಅಂಗಡಿಗಳ ಎದುರು ವಿಶೇಷ ಪೊಲೀಸ್ ಕಾವಲು ಹಾಕಲಾಗಿದ್ದು, ಅಬಕಾರಿ ಇಲಾಖೆಯ ಸಿಬ್ಬಂದಿಯೂ ಕಣ್ಣಿಟ್ಟಿದ್ದರು. ಆದರೆ, ಮದ್ಯ ಪ್ರಿಯರು ಗಲಾಟೆಗೆ ಅವಕಾಶ ನೀಡದೇ ಅತ್ಯಂತ ವಿಧೇಯತೆಯಿಂದ ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಮದ್ಯ ಖರೀದಿಸಿದರು. ಸಾಯಂಕಾಲ 7 ಗಂಟೆಯವರೆಗೆ ಮಾತ್ರ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.

ಸಂಜೆ 4 ಗಂಟೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 21,583 ಲೀಟರ್ ಮದ್ಯ ಹಾಗೂ 7,663 ಲೀಟರ್ ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಉಪ ಆಯುಕ್ತ ಆರ್. ಮೋಹನ್ ಮಾಹಿತಿ ನೀಡಿದ್ದಾರೆ.

ಮಿತಿ: ಒಬ್ಬ 2.300 ಲೀಟರ್ ಮದ್ಯ ಕೊಂಡೊಯ್ಯಲು ನಿಯಮದಲ್ಲಿ ಅವಕಾಶವಿದೆಯಾದರೂ ಲಾಕ್​ಡೌನ್ ಅವಧಿಯಲ್ಲಿ ಅಕ್ರಮ ಮಾರಾಟಕ್ಕೆ ಅವಕಾಶವಿರುವ ಕಾರಣ ಒಬ್ಬನಿಗೆ ಒಂದುಕಾಲು ಲೀಟರ್ ಮಾತ್ರ ಮದ್ಯ ಮಾರಾಟ ಮಾಡಲು ಸೂಚಿಸಲಾಗಿದೆ. ನಿಯಮ ಮೀರಿದಲ್ಲಿ ಲೈಸನ್ಸ್ ರದ್ದು ಮಾಡುವ ಬಗ್ಗೆ ಅಂಗಡಿಯವರಿಗೆ ಎಚ್ಚರಿಸಲಾಗಿದೆ ಎಂದು ಅಬಕಾರಿ ಡಿಸಿ ಆರ್. ಮೋಹನ್ ತಿಳಿಸಿದ್ದಾರೆ.

ಅಕ್ರಮ ಮದ್ಯ ವಶ: ಕಾರಿನಲ್ಲಿ ಕೊಂಡೊಯ್ದು ಇಳಿಸುತ್ತಿದ್ದ 1.51 ಲಕ್ಷ ರೂ. ಮೌಲ್ಯದ 134.200 ಲೀಟರ್ ಅಕ್ರಮ ಗೋವಾ ಸಾರಾಯಿಯನ್ನು ಅಬಕಾರಿ ಅಧಿಕಾರಿಗಳು ಭಾನುವಾರ ಅಂಕೋಲಾದಲ್ಲಿ ವಶಕ್ಕೆ ಪಡೆದಿದ್ದಾರೆ. ಹೊನ್ನೆಬೈಲ್ ನಿವಾಸಿ ವಿನಾಯಕ ನಾಯ್ಕ ಎಂಬಾತನ್ನು ಬಂಧಿಸಲಾಗಿದೆ. ಸಂದೀಪ ಮೋಹನ ಗಾಂವಕರ್ ಪರಾರಿಯಾಗಿದ್ದಾನೆ.

ಸುರಕ್ಷತೆ ಕ್ರಮ ಪರಿಶೀಲನೆ: ಕುಮಟಾ: ಸೋಮವಾರ ಬೆಳಗ್ಗೆ ಮದ್ಯದಂಗಡಿಗಳು ತೆರೆಯುವ ಮುನ್ನವೇ ಅಬಕಾರಿ ಉಪ ಅಧೀಕ್ಷಕ ಸಂತೋಷ ಕುಡಾಳಕರ ಆಗಮಿಸಿ ಸುರಕ್ಷತೆ ಕ್ರಮಗಳನ್ನು ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯ ಖರೀದಿಗೆ ಬಂದವರು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಇದಕ್ಕಾಗಿ ಸೂಕ್ತ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ನಿಗದಿತ ಪ್ರಮಾಣದಲ್ಲೇ ಮದ್ಯ ಖರೀದಿಗೆ ಅವಕಾಶವಿದೆ. ನಿಗದಿತ ಸಮಯಾವಕಾಶದ ಬಳಿಕವೂ ಮಾರಾಟ ನಡೆಸುವುದು ಕಂಡುಬಂದಲ್ಲಿ ಮದ್ಯದಂಗಡಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net