8 ತಾಲೂಕುಗಳನ್ನ ಬರಪಿಡಿತ ಎಂದು ಘೋಷಣೆಗೆ : ಹೆಚ್.ಡಿ.ರೇವಣ್ಣ ಒತ್ತಾಯ

8 ತಾಲೂಕುಗಳನ್ನ ಬರಪಿಡಿತ ಎಂದು ಘೋಷಣೆಗೆ : ಹೆಚ್.ಡಿ.ರೇವಣ್ಣ ಒತ್ತಾಯ
Published on

ಹಾಸನ: ಜಿಲ್ಲೆಯ 8 ತಾಲೂಕುಗಳಲ್ಲಿ ಮಳೆಯಿಲ್ಲದೆ ಬೆಳೆ ಹಾನಿಯಾಗಿದೆ ಎಲ್ಲಾ ತಾಲೂಕುಗಳನ್ನ ಬರಪಿಡಿತ ಎಂದು ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.

ಬರಗಾಲದ ಬಗ್ಗೆ ಚರ್ಚೆ ನಡೆಸಲು ಕೂಡಲೇ ವಿಧಾನಸಭೆ ಅಧಿವೇಶನ ಕರೆದು ರಾಜ್ಯದಲ್ಲಿ ಬರ ಘೋಷಣೆ ಮಾಡಬೇಕು. ಸರ್ಕಾರ ಗ್ಯಾರಂಟಿ ಭರವಸೆ ನೀಡಿ ರೈತರನ್ನು ಹಾಳು ಮಾಡುತ್ತಿದೆ. ಬರ ಘೋಷಣೆಗೆ ಹಾಕಿರುವ ನಿಯಮಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಭಾನುವಾರ ಸಂಸದರ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೆಆರ್‌ಎಸ್ ಡ್ಯಾಂ ಮೂಲಕ ತಮಿಳುನಾಡಿಗೆ ನೀರು ಹರಿಸದ ನಂತರ ಪ್ರಧಾನಿ ಮೋದಿ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋದರೆ ಏನು ಪ್ರಯೋಜನ? ನಿಯೋಗ ಕಡೆದುಕೊಂಡು ಹೋದರೆ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ವಾಪಾಸ್ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದೂವರೆ ತಿಂಗಳಿಂದ 16 ಟಿಎಂಸಿ ನೀರನ್ನು ಹೇಮಾವತಿ ಜಲಾಶಯದಿಂದ ಹೊರಗೆ ಬಿಡಲಾಗಿದೆ. ಕೆಲವು ಕಡೆ ನೀರಾವರಿ ಅಚ್ಚುಕಟ್ಟು ಪ್ರದೇಶ ಇಲ್ಲದ ಕಡೆಯು ನೀರು ಹರಿಯುತ್ತಿದೆ, ಯಾವ ನಾಲೆಗೆ ಎಷ್ಟು ನೀರು ಬಿಟ್ಟಿದ್ದಾರೆ ಅಂಕಿ ಅಂಶ ನೀಡಬೇಕು. ಹೇಮಾವತಿ ಜಲಾಶಯದಲ್ಲಿ ಸದ್ಯ 19 ಟಿಎಂಸಿ ನೀರಿದೆ ಎನ್ನುತ್ತಿದ್ದಾರೆ, ಉಳಿದ 16 ಟಿಎಂಸಿ ನೀರು ಎಲ್ಲಿಗೆ ಹೋಯಿತು. ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ನೀರನ್ನು ಹೇಗೆ ಬಿಟ್ಟಿದ್ದಾರೆ? ಇಲ್ಲಿಯವರೆಗೂ 16 ಟಿಎಂಸಿ ನೀರನ್ನು ತಮಿಳು ನಾಡಿಗೆ ಬಿಟ್ಟಿದ್ದಾರಾ...?, ನಾಲೆಗಳಿಗೆ ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು ನೀರಾವರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಲ ಕಾಲಕ್ಕೆ ನಮಗೆ ನೀರು ಬಿಟ್ಟಿದ್ದರೆ ರೈತರು ಒಂದು ಬೆಳೆ ತೆಗೆಯಬಹುದಿತ್ತು. ನಾಲೆಗಳಿಗೆ ಬೇಕಾಬಿಟ್ಟಿ ನೀರು ಬಿಡಲಾಗುತ್ತಿದ್ದು, ಯಾವಾಗ ನೀರು ನಿಲ್ಲಿಸುತ್ತೇವೆ ಎಂದು ರೈತರಿಗೆ ಸರಿಯಾಗಿ ಹೇಳುತ್ತಿಲ್ಲ. ಬೆಳೆ ನಷ್ಟಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳೇ ನೇರ ಹೊಣೆ, ರೈತರ ಮನೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರ ಅವರು, ರಾತ್ರಿಯೆಲ್ಲ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ, ಹೀಗಾದರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆ ಶಾಪ್‌ಶೂಟ್ ವೆಂಕಟೇಶ್ ಮೃತಪಟ್ಟಿದ್ದಾರೆ, ಅವರ ಕುಟುಂಬಕ್ಕೆ ಸರ್ಕಾರಕ್ಕೆ 15 ಲಕ್ಷರೂ. ಕೊಟ್ಟರೆ ಸಾಲದು. ಕನಿಷ್ಠ 50 ಲಕ್ಷ ಪರಿಹಾರದ ಜೊತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net