

ಮಳವಳ್ಳಿ : ತಾರತಮ್ಯವನ್ನು ತೊರೆದು ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಡಿವೈಎಸ್‌ಪಿ ಕೃಷ್ಣಪ್ಪ ಹೇಳಿದರು.
ತಾಲೂಕಿನ ಹಾಡ್ಲಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಾಡ್ಲಿ ಗ್ರಾಪಂ ಮತ್ತು ಹೊಂಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜನಾಗಿದ್ದ ಗೌತಮ ಬುದ್ಧ ಸನ್ಯಾಸತ್ವ ಸ್ವೀಕರಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದರು. ಅನಾದಿಕಾಲದಿಂದಲೂ ಮೇಲು- ಕೀಳು ಎಂಬ ತಾರತಮ್ಯ ಮನುಕುಲದೊಂದಿಗೇ ಬಂದಿದೆ. ಈ ಪಿಡುಗಿಗೆ ಪರಿಹಾರವನ್ನು ಇಂದಿನ ದಿನಗಳಲ್ಲಿ ಕಂಡುಕೊಳ್ಳಬೇಕಿದೆ ಎಂದರು.
ಹಲಗೂರು ವೃತ್ತದ ಸಿಪಿಐ ಶ್ರೀಧರ ಮಾತನಾಡಿ, ದೌರ್ಜನ್ಯಕ್ಕೆ ಒಳಗಾದವರು ವಿವಿಧ ಕಾರಣಗಳಿಗೆ ರಾಜಿ ಸಂಧಾನ ಮಾಡಿ ೊಳ್ಳುವುದು ಹೆಚ್ಚಾಗಿದೆ. ಈ ಮೂಲಕ ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವುದು ಶೋಚನಿಯ ಎಂದರು. ಹಲಗೂರು ಠಾಣೆ ಪಿಎಸ್‌ಐ ಮಹೇಂದ್ರ, ವಕೀಲ ಶಿಂಗಟಗೆರೆ ಶಿವಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಕಾಂತ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅಶ್ವಿನಿ, ಸದಸ್ಯರಾದ ಚಿಕ್ಕಣ್ಣ, ಕೋಮಲಾ, ಲೋಕೇಶ, ಕೆಡಿಪಿ ಸದಸ್ಯ ಶಶಿಕುಮಾರ ಇತರರು ಇದ್ದರು.