

ತುಮಕೂರು: ಕರೊನಾ ಸಮರದಲ್ಲಿ ದೇಶಕ್ಕೆ ಮಾದರಿ ಎನಿಸಿರುವ ತುಮಕೂರು ಜಿಲ್ಲಾಡಳಿತ ಈಗ ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಆಸ್ಪತ್ರೆ ಸೇರಿ ನಗರದ 18 ಕಡೆ ಕಡೆಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸಿದೆ.
ಕರನೊ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿರುವ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ. ಜತೆಗೆ ನಗರದ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಫೀವರ್ ಕ್ಲಿನಿಕ್ ಸೋಮವಾರದಿಂದಲೇ ಕಾರ್ಯಾರಂಭ ಮಾಡಿವೆ. ಇದಲ್ಲದೆ ಇನ್ನೂ 9 ಕಡೆ ಪಾಲಿಕೆ ಸಹಕಾರದಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಾಗಿದ್ದು ಈ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಪಾಲಿಕೆ ಒದಗಿಸಿದೆ.
ಜಿಲ್ಲಾ ಆಸ್ಪತ್ರೆಯ ಫೀವರ್ ಕ್ಲಿನಿಕ್ 3 ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 8 ಹಾಗೂ ರಾತ್ರಿ 8 ರಿಂದ ಬೆಳಗ್ಗೆ 8ಗಂಟೆವರೆಗೆ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಸೇವೆ ಲಭ್ಯವಿದೆ. ಉಳಿದ ಪಿಎಚ್‌ಸಿಗಳಲ್ಲಿ 2 ಶಿಫ್ಟ್‌ಗಳಲ್ಲಿ ಆರೋಗ್ಯ ಸೇವೆ ಲಭ್ಯವಿರಲಿದೆ.
8 ಪಿಎಚ್‌ಸಿಗಳಲ್ಲಿ ಚಿಕಿತ್ಸೆ ಲಭ್ಯ: ಸ್ಮಾರ್ಟ್‌ಸಿಟಿಯ 8 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ. ಸಿದ್ದಗಂಗಾಮಠ, ಕ್ಯಾತಸಂದ್ರ, ಶೆಟ್ಟಿಹಳ್ಳಿಗೇಟ್, ಶಿರಾಗೇಟ್, ಶಾಂತಿನಗರ, ಅಗ್ರಹಾರ, ಕುರಿಪಾಳ್ಯ ಹಾಗೂ ಕೋತಿತೋಪು ಪಿಎಚ್‌ಸಿಗಳಲ್ಲಿ ಜ್ವರ, ಕೆಮ್ಮು, ನೆಗಡಿಗೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ಲಭ್ಯವಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಕ್ಲಿನಿಕ್!: 1200 ಮನೆಗಳಿರುವ ದಿಬ್ಬೂರು ವಸತಿ ಸಂಕೀರ್ಣದ ಸಮುದಾಯ ಭವನ, ಹನುಮಂತಪುರ ಬೈಲಾಂಜನೇಯ ದೇವಸ್ಥಾನ, ಶಾಂತಿನಗರ ಜನತಾಕಾಲನಿ ಅಂಗನವಾಡಿ, ಗೆದ್ದಲಹಳ್ಳಿ ಅಂಗನವಾಡಿ, ಗೂಡ್‌ಶೆಡ್ ಕಾಲೋನಿ ಅಂಗನವಾಡಿ, ಸತ್ಯಮಂಗಲ ಅಂಗನವಾಡಿ, ಕುರಿಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆ, ಸಿದ್ದಾರ್ಥ ಶ್ರೀನಿವಾಸ ಪ್ರಾಥಮಿಕ ಶಾಲೆ ಹಾಗೂ ರಾಜೀವ್‌ಗಾಂಧಿನಗರ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ.
ತಕ್ಷಣವೇ ಪರೀಕ್ಷೆ: ಫೀವರ್ ಕ್ಲಿನಿಕ್‌ಗಳಲ್ಲಿ ಕರೊನಾ ಗುಣಲಕ್ಷಣಗಳುಳ್ಳ ಜ್ವರ, ಕೆಮ್ಮು, ನೆಗಡಿ, ಉಸಿರಾಟ ತೊಂದರೆಗಳ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುವುದು. ರೋಗದ ಲಕ್ಷಣಗಳನ್ನು ಹಾಗೂ ರೋಗಿಯ ಟ್ರಾವೆಲ್ ಹಿಸ್ಟರಿ ಗಮನಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ತತಕ್ಷಣವೇ ಕರೊನಾ ಪರೀಕ್ಷೆಗೆ ಒಳಪಡಿಸಲಾಗುವುದು. ಓರ್ವ ವೈದ್ಯಾಧಿಕಾರಿ, ಓರ್ವ ಶುಶ್ರೂಷಕಿ ಹಾಗೂ ಡಿ ಗ್ರೂಪ್ ಸಿಬ್ಬಂದಿ ಸೇರಿ ಮೂವರು ಫೀವರ್ ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸುವರು. ಈ ಕ್ಲಿನಿಕ್ ಉಸ್ತುವಾರಿಗೆ ನೋಡಲ್ ಅಧಿಕಾರಿಗಳನ್ನಾಗಿ ಮೆಡಿಕಲ್ ಆಫೀಸರ್ ಒಬ್ಬರನ್ನು ನೇಮಿಸಲಾಗುವುದು. ಕರೊನಾ ರೋಗಗಳ ಸಂಬಂಧಿಸಿದ ಲಕ್ಷಣಗಳುಳ್ಳ ರೋಗಿಗಳು ಇದರ ಸೇವೆಯನ್ನು ಪಡೆದು ಚಿಕಿತ್ಸೆ ಪಡೆಯಬಹುದು ಎಂದು ಡಿಎಚ್‌ಒ ಡಾ.ಬಿ.ಆರ್.ಚಂದ್ರಿಕಾ ‘ವಿಜಯವಾಣಿ’ಗೆ ತಿಳಿಸಿದರು.