

ಲೋಕೇಶ್.ಎಂ ಐಹೊಳೆ ಜಗಳೂರು
ತಾಲೂಕಿನ ದೇವಿಕೆರೆ ಗ್ರಾಮದ ಕೊಡದಗುಡ್ಡ ದೇವಾಯಲವು ಕರ್ನಾಟಕದ ಅತ್ಯಂತ ಜನಪ್ರಿಯ ಭಕ್ತಿ ಕೇಂದ್ರವಾಗಿದೆ. ಇದು ಬೆಟ್ಟದ ತುದಿಯಲ್ಲಿರುವ ಶ್ರೀ ವೀರಭದ್ರೇಶ್ವರನ ದೇಗುಲವಾಗಿದ್ದು, ಸ್ವಾಮಿಯ ಉದ್ಭವಮೂರ್ತಿಯನ್ನು ಇಲ್ಲಿ ಪೂಜಿಸಲಾಗುತ್ತದೆ.
ಕೊಡದಗುಡ್ಡ ಪ್ರದೇಶದ ತುತ್ತತುದಿಯಲ್ಲಿ ನೆಲೆಸಿರುವ ಸ್ವಾಮಿ ದರ್ಶನಕ್ಕೆ ಉತ್ತರ ಮತ್ತು ದಕ್ಷಿಣ ಕರ್ನಾಟಕ, ಮಲೆನಾಡು ಭಾಗ, ಹೈದರಬಾದ್ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅಲ್ಲದೇ ದೇವರನ್ನು ಕಣ್ತುಂಬಿಕೊಳ್ಳಲು ಜಾತ್ರೆಗೆ ಪಾದಯಾತ್ರೆಯ ಮೂಲಕ ಬರುತ್ತಾರೆ.
ದೇಗುಲವು ಗೋಪುರ, ಗರ್ಭಗುಡಿ ಮತ್ತು ಪ್ರಾಂಗಣವನ್ನು ಒಳಗೊಂಡಿದೆ. ಗರ್ಭಗುಡಿಯಲ್ಲಿ ಸುಮಾರು 8 ಅಡಿ ಎತ್ತರದ ವೀರಭದ್ರ ಸ್ವಾಮಿಯ ಮೂರ್ತಿ ಇದೆ. ವಾಮಾಚಾರ, ದೃಷ್ಟಿದೋಷ, ಚರ್ಮ ಕಾಯಿಲೆ, ದೇಹಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಇದ್ದರೆ ಅವುಗಳನ್ನು ಸ್ವಾಮಿ ನಿವಾರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಭಕ್ತರು ಹರಕೆ ಕಟ್ಟಿಕೊಂಡು ಬಂದು ತಾಯತ ಕಟ್ಟಿಸಿಕೊಳ್ಳುತ್ತಾರೆ.
ಎರಡು ಸಾವಿರ ಅಡಿ ಎತ್ತರದ ಬೆಟ್ಟ: ಗುಡ್ಡದ ಮೇಲೆ ನೆಲಸಿರುವ ಸ್ವಾಮಿಯ ದೇವಸ್ಥಾನವು ಕೆಳಭಾಗದಿಂದ ಸುಮಾರು 2 ಸಾವಿರ ಅಡಿಯಷ್ಟು ಎತ್ತರವಾಗಿದೆ. ಗುಡ್ಡ ಏರಲು ತೇರಿನ ಆವರಣದಿಂದ ಕಾಳಿಕಾದೇವಿ ಗುಡಿ ಮಾರ್ಗವಾಗಿ ಹತ್ತಿದರೆ 307 ಮೆಟ್ಟಿಲು ಮತ್ತು ಗ್ರಾಮದ ಮುಖಾಂತರವಾಗಿ 225 ಮೆಟ್ಟಿಲುಗಳನ್ನು ಭಕ್ತರು ಏರಬೇಕಾಗುತ್ತದೆ.
ಗುಡ್ಡದ ಮೇಲಿಂದ ಕೆಳಭಾಗದಲ್ಲಿರುವ ಕೆರೆ, ಕೆಂಪು ಹಂಚಿನ ಮನೆಗಳನ್ನು ಕಾಣಬಹುದು. ಆದರೆ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರು ಇಲ್ಲದೆ ಬರಿದಾಗಿದೆ. ಗುಡ್ಡದ ಮೇಲೆ ಕಲ್ಲಿನಿಂದ ಕೆತ್ತಲಾಗಿರುವ 8 ಅಡಿ ಎತ್ತರದ ಶ್ರೀ ವೀರಭದ್ರಸ್ವಾಮಿಯ ಏಕಶಿಲೆ ಇದೆ. ಸ್ವಾಮಿ ವಿಗ್ರಹದ ಎದುರು ಬಸವಣ್ಣನ ಗುಡಿ ಇದೆ. ಗುಡ್ಡದ ಮೇಲಿನ ಗೋಪುರ ನೋಡಲು ಸುಂದರವಾಗಿದೆ. ಗುಡ್ಡಕ್ಕೆ ಹೋಗುವಾಗ ಮಧ್ಯದಲ್ಲಿ ತಾಯಿ ಕಾಳಿಕಾ ದೇವಿ ದೇವಸ್ಥಾನವಿದ್ದು, ಭಕ್ತರು ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕಾಳಿಕಾ ದೇವಿಗೂ ಪೂಜೆ ಸಲ್ಲಿಸುತ್ತಾರೆ.
ವೀರಭದ್ರನ ಐತಿಹ್ಯ: ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಕೊಟ್ಟೂರು ಗುರು ಬಸವೇಶ್ವರರು ಕೊಟ್ಟೂರಿಗೆ ಬಂದಾಗ ರಾತ್ರಿ ಆಗಿದ್ದರಿಂದ ಅದೇ ಊರಿನಲ್ಲಿ ನೆಲೆಸಿದರು. ಆಗ ಅವರು ವೀರಭದ್ರ ಸ್ವಾಮಿಯನ್ನು ರಾತ್ರಿ ಮಲಗಲು ಜಾಗ ಕೇಳಿದಾಗ ಅದಕ್ಕೆ ಸ್ವಾಮಿ ಒಪ್ಪಿಗೆ ಸೂಚಿಸುತ್ತಾನೆ. ಮರುದಿನ ಬೆಳಗಾಗುವುದರಲ್ಲಿ ಬಸವೇಶ್ವರರು ಕೊಟ್ಟೂರೇಶ್ವರದ ಎಲ್ಲ ಜಾಗ ಅಲಂಕರಿಸಿದರು. ಇದನ್ನು ವೀರಭದ್ರ ಸ್ವಾಮಿಯು ಪ್ರಶ್ನಿಸಿದಾಗ ಬಸವೇಶ್ವರರು, ಇದರಲ್ಲಿ ನನ್ನ ಪಾತ್ರವೇನು ಇಲ್ಲ. ಇದು ಶಿವನ ಇಚ್ಛೆ. ಇನ್ನು ಮುಂದೆ ನೀವು ಕೊಡದ ಗುಡ್ಡದಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಎಂದರು. ಆಗ ವೀರಭದ್ರರು ಕೊಡದ ಗುಡ್ಡದಲ್ಲಿ ನೆಲೆಸಿ ಕಲಿಯುಗದಲ್ಲೂ ಭಕ್ತರ ಇಚ್ಛೆಗಳನ್ನು ಈಡೇರಿಸುವ ದೈವವಾಗಿದ್ದಾರೆ.
ಕ್ಷೇತ್ರಕ್ಕೆ ಮಾರ್ಗ: ಜಗಳೂರು ತಾಲೂಕು ದೇವಿಕೆರೆ ಗ್ರಾಮದ ಮೂಲಕ ಬಸವಾಪುರಕ್ಕೆ ಅಲ್ಲಿಂದ ಒಂದು ಕಿಮೀ ದೂರ ಸಾಗಿದರೆ ಕೊಡದಗುಡ್ಡ ವೀರಭದ್ರಸ್ವಾಮಿ ದೇವಸ್ಥಾನ ಸಿಗುತ್ತದೆ. ದಾವಣಗೆರೆಯಿಂದ 42 ಕಿಮೀ, ಜಗಳೂರಿನಿಂದ 15 ಕಿಮೀ ದೂರದಲ್ಲಿದೆ.