

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ನಡುವೆಯೇ ಸಾಂಕ್ರಾಮಿಕ ರೋಗಗಳು ಲಗ್ಗೆ ಇಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನಲ್ಲಿ 3 ಮಲೇರಿಯಾ, 7 ಚಿಕೂನ್‌ಗುನ್ಯಾ ಹಾಗೂ 8 ಡೆಂಘೆ ಪ್ರಕರಣ ಪತ್ತೆಯಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ರೋಗ ಹರಡುವ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ವರ್ಷದ ಹಿಂದೆ ಡೆಂಘೆಗೆ ಹೊಸಕೋಟೆ ತಾಲೂಕು ಕೆ.ಸತ್ಯವಾರದ 14 ವರ್ಷದ ಬಾಲಕಿ ಚಿಕಿತ್ಸೆ ಲಕಾರಿಯಾಗದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದೆಲ್ಲದಕ್ಕೂ ಮುಂಜಾಗ್ರತೆಯೇ ಮದ್ದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಸಿದೆ.
ಮಾರ್ಗಸೂಚಿ ಪಾಲನೆ: ಸಾಂಕ್ರಾಮಿಕ ರೋಗಗಳ ಬಗ್ಗೆ ನೀಡಲಾಗುವ ಮಾರ್ಗಸೂಚಿಗಳನ್ನು ಅಧಿಕಾರಿಗಳು ತಪ್ಪದೇ ಪಾಲಿಸಬೇಕು, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಅಂತರ ಇಲಾಖೆ ಸಭೆ ಆಯೋಜಿಸಿ ರೋಗಗಳ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕೆಂಬುದು ಜಿಲ್ಲಾಡಳಿತದ ಸೂಚನೆಯಾಗಿದೆ.
ಲಾರ್ವಾ ಸಮೀಕ್ಷೆ ಚುರುಕು: ವೈದ್ಯಾಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಲಾರ್ವಾ ಸಮೀಕ್ಷೆ ಚುರುಕುಗೊಂಡಿದೆ. ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಲಾರ್ವಾ ಸಮೀಕ್ಷೆಗಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಯಾವುದೇ ಜ್ವರ ಪ್ರಕರಣ ಕಂಡುಬಂದರೆ ರಕ್ತದ ಮಾದರಿ ಸಂಗ್ರಹಿಸಿ, ಶಂಕಿತ ರೋಗಲಕ್ಷಣ ಕಂಡುಬಂದರೆ ಕೂಡಲೇ ಪ್ರಯೋಗಾಲಯಕ್ಕೆ ಕಳುಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಅಗತ್ಯ ಕ್ರಮಗಳೇನು?:
*ಜನವಸತಿ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಬೇಕು.
*ನೀರು ಶೇಖರಣೆಗೊಳ್ಳುವ ಅನುಪಯುಕ್ತ ವಸ್ತುಗಳ ವಿಲೇವಾರಿ.
*ರಸ್ತೆ ಗುಂಡಿ ಮುಚ್ಚುವ ಮೂಲಕ ನೀರು ನಿಲ್ಲದಂತೆ ಕ್ರಮಕೈಗೊಳ್ಳುವುದು.
*ಕುಡಿವ ನೀರು ಸರಬರಾಜಿಗೆ ಮೊದಲು ಸೂಕ್ತ ಪ್ರಮಾಣದಲ್ಲಿ ಕ್ಲೋರಿನೇಷನ್ ಮಾಡುವುದು.
*ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಜಾಗೃತಿ ಮೂಡಿಸುವುದು.
*ವಸತಿ ನಿಲಯಗಳಲ್ಲಿ ಕಿಟಕಿಗಳಿಗೆ ಮೆಶ್ ಅಳವಡಿಸಬೇಕು, ಮಕ್ಕಳಿಗೆ ಸೊಳ್ಳೆ ರಕ್ಷಣೆ ನೀಡಬೇಕು.