

ಮಂಗಳೂರು: ದ.ಕ ಜಿಲ್ಲೆಯಲ್ಲಿ ಶುಕ್ರವಾರ ಕರೊನಾ ಬರೋಬ್ಬರಿ 8 ಮಂದಿಯನ್ನು ಬಲಿ ಪಡೆದುಕೊಂಡಿದೆ.
ಮೃತರಾದವರಲ್ಲಿ 7 ಪುರುಷರು ಮತ್ತು ಓರ್ವ ಮಹಿಳೆ ಸೇರಿದ್ದು, ಎಲ್ಲರೂ ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದರು. ಕೋವಿಡ್‌ನಿಂದಾಗಿ ಒಂದೇ ದಿನ ಇಷ್ಟು ಸಂಖ್ಯೆಯ ಸಾವು ಸಂಭವಿಸಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 38ಕ್ಕೇ ಏರಿಕೆಯಾಗಿದೆ.
ಯಕೃತ್, ಲಿವರ್ ಸಮಸ್ಯೆಯಿಂದ 68 ವರ್ಷದ ಪುರುಷರೊಬ್ಬರು ಬುಧವಾರ ಮೃತಪಟ್ಟಿದ್ದು, ಅವರ ವರದಿ ಶುಕ್ರವಾರ ಪಾಸಿಟಿವ್ ಬಂದಿದೆ. ಎಲ್ಲ 8 ಪ್ರಕರಣಗಳಲ್ಲಿ ಸಾವಿನ ಕಾರಣ ನಿರ್ಧರಿಸಿಲು ಜಿಲ್ಲಾಡಳಿತ ನೇಮಿಸಿರುವ ತಜ್ಞರ ಸಮಿತಿ ಪರಿಶೀಲಿಸುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಶುಕ್ರವಾರ ಒಟ್ಟು 139 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಕೋವಿಡ್ ಮತ್ತು ಖಾಸಗಿ ಆಸ್ಪತ್ರೆಯಿಂದ ಒಟ್ಟು 51 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಾದೂಗಾರನೂ ಮೃತ್ಯು: ಸೋಂಕಿಗೆ ಬಲಿಯಾದವರ ಸಾಲಿಗೆ ಸುರತ್ಕಲ್ ಹೊಸಬೆಟ್ಟುವಿನ 35 ವರ್ಷದ ಜಾದೂಗಾರರೊಬ್ಬರೂ ಸೇರಿದ್ದಾರೆ. ನಾಲ್ಕು ದಿನದ ಹಿಂದೆ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುದ್ರೋಳಿ ಗಣೇಶ್ ಅವರ ತಂಡದಲ್ಲಿ ಕಲಾವಿದರಾಗಿದ್ದ ಅವರು ನಂತರ ವಿದೇಶಕ್ಕೆ ತೆರಳಿ ಉದ್ಯೋಗದ ಜತೆಗೆ ಕ್ಲೋಸ್ ಅಪ್ ಜಾದೂ ಕಾರ್ಯಕ್ರಮ ನಡೆಸುತ್ತಿದ್ದರು. ಕೆಲ ಸಮಯದ ಹಿಂದೆ ಸ್ವದೇಶಕ್ಕೆ ವಾಪಸಾಗಿ ಸ್ಥಳೀಯವಾಗಿ ಉದ್ಯೋಗ ಮಾಡುತ್ತಿದ್ದರು. ರಸಸಂಜೆಗಳಲ್ಲಿ ಕಾರ್ಯಕ್ರಮವನ್ನೂ ನೀಡುತ್ತಿದ್ದರು. ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ.
ಕಾಸರಗೋಡಿನ 17 ಮಂದಿಗೆ ಪಾಸಿಟಿವ್: ಕಾಸರಗೋಡು: ಜಿಲ್ಲೆಯ 17 ಮಂದಿ ಸಹಿತ ಕೇರಳದಲ್ಲಿ ಶುಕ್ರವಾರ 416 ಮಂದಿಗೆ ಕೋವಿಡ್-19 ಭಾದಿಸಿದೆ. ಇವರಲ್ಲಿ 123 ಮಂದಿ ವಿದೇಶದಿಂದ, 51 ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದರೆ, 204 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಐಟಿಬಿಪಿಯ 35 ಮಂದಿ, ಸಿಐಎಸ್‌ಎಫ್, ಬಿಎಸ್‌ಎಫ್‌ನ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ಎರಡು ಕುಟುಂಬಗಳಲ್ಲಿ 16 ಮಂದಿಗೆ ದೃಢ: ಬಂಟ್ವಾಳ: ಪುದು ಗ್ರಾಮ ವ್ಯಾಪ್ತಿಯ ಮಾರಿಪಳ್ಳದ ಎರಡು ಕುಟುಂಬಗಳ 16 ಸದಸ್ಯರಿಗೆ ಶುಕ್ರವಾರ ಕರೊನಾ ಸೋಂಕು ಪಾಸಿಟಿವ್ ಆಗಿದೆ. ಇತ್ತೀಚಿಗೆ ಮಾರಿಪಳ್ಳದ ವ್ಯಕ್ತಿಯೊಬ್ಬರು ಅಪಘಾತದಿಂದ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಅವರ ಗಂಟಲ ದ್ರವದ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆದರೆ ಅವರ ಮನೆಯ ಹಾಗೂ ಪತ್ನಿಯ ಸಹೋದರಿಯ ಮನೆಯವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಬಂದ ವರದಿಯಲ್ಲಿ ಈ ಎರಡು ಮನೆಯ ಒಟ್ಟು 12 ಮಂದಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಾರಿಪಳ್ಳ ಪರಿಸರದ ಮತ್ತೊಂದು ಮನೆಯ ವ್ಯಕ್ತಿಗೆ ಕೆಲವು ದಿನಗಳ ಹಿಂದೆ ಕರೊನಾ ಪಾಸಿಟಿವ್ ಆಗಿತ್ತು. ಅವರ ಮನೆಯ ನಾಲ್ವರಿಗೆ ಕರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಗ್ರಾಮದಲ್ಲಿ 14 ದಿನ ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಯಂಪ್ರೇರಿತ ಬಂದ್‌ಗೆ ನಿರ್ಧರಿಸಲಾಗಿದೆ. ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 24 ಪ್ರಕರಣಗಳು ದೃಢಪಟ್ಟಿವೆ.
ಮಸೀದಿಗಳು ಬಂದ್: ಪುದು ಗ್ರಾಮದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ಮಸೀದಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಬೆಳ್ತಂಗಡಿಯಲ್ಲಿ 5 ಮಂದಿಗೆ ಪಾಸಿಟಿವ್: ಬೆಳ್ತಂಗಡಿ: ತಾಲೂಕಿನಲ್ಲಿ ಶುಕ್ರವಾರ ಐದು ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಗುಂಡೂರಿ ಗ್ರಾಮ 27 ವರ್ಷದ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದು, ಮತ್ತೋರ್ವ ಗುಂಡೂರಿ ಗ್ರಾಮದ 10 ವರ್ಷದ ಮಗುವಿಗೆ ಪಾಸಿಟಿವ್ ದೃಢಪಟ್ಟಿದೆ. ಕುವೆಟ್ಟು ಗ್ರಾಮದ 59 ಹರೆಯದ ವ್ಯಕ್ತಿ, ಪಡಂಗಡಿ ಗ್ರಾಮದ 57 ವರ್ಷದ ಮಹಿಳೆ ಹಾಗೂ ಲಾಯಿಲ ರಾಘವೇಂದ್ರ ಮಠದ ನಿವಾಸಿ 65 ಪ್ರಾಯದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ರೈಲ್ವೆ ವಸತಿಗೃಹ, ಅಂಗಡಿ ಸೀಲ್‌ಡೌನ್: ಕಡಬ: ಬಿಹಾರದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ನೆಟ್ಟಣ ರೈಲ್ವೆ ಸಿಬ್ಬಂದಿ 22ವರ್ಷದ ಯುವಕನ ಕರೊನಾ ವರದಿ ಪಾಸಿಟಿವ್ ಬಂದಿದ್ದು, ರೈಲ್ವೆ ವಸತಿಗೃಹ, ಅವರು ಭೇಟಿ ನೀಡಿದ್ದ ನೆಟ್ಟಣದ ಜನರಲ್ ಸ್ಟೋರನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.
ಸಿಐಎಸ್‌ಎಫ್ ಅಧಿಕಾರಿ ಸಾವು: ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಅಧಿಕಾರಿ ಕರೊನಾಗೆ ಬಲಿಯಾಗಿದ್ದಾರೆ. ಸಿಐಎಸ್‌ಎಫ್ ಕ್ಯಾಂಪ್‌ನಲ್ಲಿ ಎಎಸ್‌ಐ ಆಗಿದ್ದ ಅವರು, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕಾರಿ ಸಾವಿನ ಕುರಿತು ಸಿಐಎಸ್‌ಎಫ್ ಟ್ವೀಟ್ ಮಾಡಿದೆ.
1500 ಬೆಡ್‌ಗಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆಗೆ ಒತ್ತಾಯ: ಪ್ರತೀ ತಾಲೂಕಲ್ಲಿ 10 ಆಂಬುಲೆನ್ಸ್ ಮೀಸಲಿಡಲು ರಮಾನಾಥ ರೈ ಆಗ್ರಹ:
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ 1500 ಹಾಸಿಗೆಗಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ತೆರೆಯಬೇಕೆಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಕಚೇರಿ ಸುದ್ದಿಗೋಷ್ಠಿಯಲ್ಲಿ ಗುರುವಾರ, ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿಸಿದ ಕಾರಣ ಇತರ ರೋಗಿಗಳು ಚಿಕಿತ್ಸೆಗೆ ಪರದಾಡುವ ಸ್ಥಿತಿಯಿದೆ. ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ದ.ಕ.ಜಿಲ್ಲಾಡಳಿತ ವಿಫಲವಾಗಿದೆ. ಆರಂಭದ ದಿನದಲ್ಲಿದ್ದ ಹುಮ್ಮಸ್ಸು ಈಗ ಕಾಣಿಸುತ್ತಿಲ್ಲ. ಜಿಲ್ಲೆಯಲ್ಲಿ ರ‌್ಯಾಂಡಮ್ ಟೆಸ್ಟ್ ಮಾಡಿಸಿ, ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಪ್ರತೀ ತಾಲೂಕಿನಲ್ಲಿ ತಲಾ 10 ಆಂಬುಲೆನ್ಸ್‌ಗಳನ್ನು ಮೀಸಲಿಡಬೇಕು. ಕೇರಳ ಮಾದರಿಯಲ್ಲಿ ಸರ್ಕಾರ ಜನರಿಗೆ ದಿನಬಳಕೆ ವಸ್ತುಗಳನ್ನು ನೀಡಬೇಕು. ಕರೊನಾ ನಿಯಂತ್ರಣಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ಎಂದರು.
ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಮನಪಾ ಪ್ರತಿಪಕ್ಷ ನಾಯಕ ಅಬ್ದುಲ್ ರವ್ೂ, ಕಾರ್ಪೊರೇಟರ್ ನವೀನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ನೀರಜ್‌ಪಾಲ್, ಸಂತೋಷ್‌ಕುಮಾರ್ ಶೆಟ್ಟಿ, ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿದ್ದರು.
ಉಳ್ಳಾಲದಲ್ಲಿ ಸಹಾಯವಾಣಿ, ಕಾರ್ಯಪಡೆ: ಶಾಸಕ ಯು.ಟಿ.ಖಾದರ್ ಮಾಹಿತಿ: ಮಂಗಳೂರು: ಉಳ್ಳಾಲದಲ್ಲಿ ರ‌್ಯಾಂಡಮ್ ಟೆಸ್ಟಿಂಗ್ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಶೀಘ್ರ ಸಹಾಯವಾಣಿ ಆರಂಭಿಸಲಾಗುವುದು ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಉಳ್ಳಾಲ ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ 18-50 ವರ್ಷದೊಳಗಿನ ಆರೋಗ್ಯವಂತ ಯುವಕರ ಕಾರ್ಯಪಡೆ ರಚಿಸಿ ಅವರಿಗೆ ಅಗತ್ಯ ತರಬೇತಿ ನೀಡಿ, ಮುಂದಿನ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು. ವಾರ್ಡ್‌ನ ಪ್ರತಿ ಮನೆಗಳ ಸರ್ವೇ ನಡೆಸಿ 50 ವರ್ಷ ಮೇಲ್ಪಟ್ಟವರು, 10 ವರ್ಷದ ಕೆಳಗಿನ ಮಕ್ಕಳ ಪಟ್ಟಿ ತಯಾರಿಸಲಾಗುತ್ತದೆ. ರ‌್ಯಾಪಿಡ್ ಕಿಟ್ ಮೂಲಕ ತಪಾಸಣೆಗೆ ಒಳಪಡಿಸಿ ಸೋಂಕು ಇದ್ದಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ದಾನಿಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದಲ್ಲಿ ಆಂಬುಲೆನ್ಸ್ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕ್ಸಿತೆ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರೆ, ಸಾರ್ವಜನಿಕರು ಈ ಕುರಿತು ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲೂ ಸೋಂಕಿನ ಭಯದಿಂದ ವೈದ್ಯರು ನರ್ಸ್‌ಗಳು ಕೆಲಸಕ್ಕೆ ಹಾಜರಾಗಲು ಭಯಪಡುತ್ತಿದ್ದಾರೆ. ಪ್ರಸ್ತುತ ಶೇ.60 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅತ್ಯಂತ ಆಘಾತಕಾರಿ ವಿಷಯ ಎಂದರು.
ವಾಹನ ತಡೆ ಹಿಡಿದ ಸಂಚಾರಿ ಪೊಲೀಸರು: ಮಂಗಳೂರು: ರಾತ್ರಿ 8ರಿಂದ ಮುಂಜಾನೆ 5 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿದ್ದರೂ, ಅದನ್ನು ಲೆಕ್ಕಿಸದೆ ವಾಹನ ಚಲಾಯಿಸುತ್ತಿದ್ದರಿಗೆ ನಗರದ ವಿವಿಧೆಡೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಶುಕ್ರವಾರ ರಾತ್ರಿ ಮಂಗಳೂರು ನಗರ ಪ್ರವೇಶಿಸುವ ಹಾಗೂ ನಗರದಿಂದ ಹೊರ ಹೋಗುವ ಎಲ್ಲ ಗಡಿಗಳನ್ನು ಬಂದ್ ಮಾಡಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ತಡೆಹಿಡಿದಿದ್ದಾರೆ. ಎಲ್ಲ ವಾಹನಗಳ ನೋಂದಣಿ ಸಂಖ್ಯೆಯನ್ನು ತೆಗೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ರಾತ್ರಿ 8 ಗಂಟೆ ಬಳಿಕ ಕರ್ಫ್ಯೂ ಇದ್ದರೂ, ನಗರದಲ್ಲಿ ಕೆಲವರು ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿದೆ. ಜತೆಗೆ ಅಂಗಡಿ, ಬಾರ್‌ಗಳೂ ಓಪನ್ ಇರುತ್ತವೆ.