

ಮಳವಳ್ಳಿ: ಪಟ್ಟಣದಲ್ಲಿ ಫೆ.4ರಂದು ದಂಡಿನ ಮಾರಮ್ಮ ಹಾಗೂ 7-8 ರಂದು ನಡೆಯಲಿರುವ ಪಟ್ಟಲದಮ್ಮನ ಸಿಡಿಹಬ್ಬದ ಅದ್ದೂರಿ ಆಚರಣೆಗೆ ತಾಲೂಕು ಮತ್ತು ಪುರಸಭೆ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮಂಗಳವಾರ ದಂಡಿನಮಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಸಿಡಿಹಬ್ಬಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಫೆ.7ರಂದು ಬೆಳಗಿನಿಂದಲೂ ಪಟ್ಟಲದಮ್ಮ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.
ಘಟಗಳ ಮೆರವಣಿಗೆ: ರಾತ್ರಿ 8 ಗಂಟೆಗೆ ಸಾಂಪ್ರದಾಯಿಕವಾಗಿ ಪೇಟೆ ಒಕ್ಕಲಗೇರಿ, 10ಗಂಟೆಗೆ ಸಿದ್ಧಾರ್ಥನಗರ, 12 ಗಂಟೆಗೆ ಕೀರ್ತಿನಗರ, 1ಗಂಟೆಗೆ ಗಂಗಾಮತ ಬೀದಿ, 3 ಗಂಟೆಗೆ ಅಶೋಕನಗರ ಹಾಗೂ ಬೆಳಗಿನ ಜಾವ 5 ಗಂಟೆಗೆ ಬಸವಲಿಂಗಪ್ಪ ನಗರದ ಮಹಿಳೆಯರು ಪ್ರತ್ಯೇಕವಾಗಿ ನೂರಾರು ಸಂಖ್ಯೆ ಸರತಿಯಲ್ಲಿ ಘಟಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವರು.
ನಂತರ ಮಧ್ಯರಾತ್ರಿ ವೇಳೆಗೆ ಕೋಟೆ ಬೀದಿಯಲ್ಲಿರುವ ಪಟೇಲರ ಚಿನ್ನೇಗೌಡರ ಕುಟುಂಬದವರು ಸಿಡಿಬಂಡಿಗೆ ಪೂಜೆ ಸಲ್ಲಿಸಿದ ನಂತರ ಸಾರಂಗಪಾಣಿ ದೇವಸ್ಥಾನದ ಬಳಿ ಸಿಡಿಬಂಡಿಗೆ ಸಿಡಿರಣ್ಣ (ಮನುಷ್ಯನ ಆಕೃತಿಯ ಕಂಚಿನ ಪ್ರತಿಮೆ)ನನ್ನು ಕಟ್ಟಿ ಚಾಲನೆ ನೀಡಲಾಗುತ್ತದೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಸುಲ್ತಾನ್ ರಸ್ತೆ ಬದಿಯಲ್ಲಿರುವ ಪಟ್ಟಲದಮ್ಮನ ದೇವಸ್ಥಾನದ ಬಳಿಗೆ ಬೆಳಗ್ಗೆ 10 ಗಂಟೆಗೆ ಸಿಡಿಬಂಡಿಯನ್ನು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಎಳೆದು ತರುತ್ತಾರೆ.
ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ದೇವಸ್ಥಾನದ ಮುಂಭಾಗದಲ್ಲಿ ಸಿದ್ಧಪಡಿಸಿರುವ ಕೊಂಡವನ್ನು ಹಾಯುತ್ತಿದ್ದಂತೆ ಪಟ್ಟಲದಮ್ಮನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿಡಿಹಬ್ಬಕ್ಕೆ ತೆರೆ ಬೀಳಲಿದೆ.