

ಕಲಬುರಗಿ: ೨೦೨೨ ಜುಲೈ ೧ ರಿಂದ ೨೦೨೪ ಜುಲೈ ೩೧ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ ೬ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್‌ಜಿ ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತ ಆರ್ಥಿಕ ಸೌಲಭ್ಯ ನೀಡಿದ್ದರಿಂದ ಆರ್ಥಿಕ ನಷ್ಟವಾಗಿದ್ದು, ಏಳನೇ ವೇತನ ಆಯೋಗದಂತೆ ಎಲ್ಲ ಸೌಲಭ್ಯ ನೀಡಬೇಕು ಎಂದು ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕ ನೀಲಕಂಠಯ್ಯ ಹಿರೇಮಠ ಆಗ್ರಹಿಸಿದರು.
ರಾಜ್ಯದಲ್ಲಿ ೧೨ ಸಾವಿರ ನಿವೃತ್ತ ನೌಕರರಿದ್ದು, ಸತತ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೂ ಸರ್ಕಾರ ಸ್ಪಂದಿಸಿಲ್ಲ. ಇದೀಗ ಮತ್ತೊಂದು ಸುತ್ತಿನ ಹೋರಾಟವನ್ನು ಮಾಡಲಾಗುತ್ತಿದೆ. ೬ನೇ ವೇತನ ಆಯೋಗದ ಸೌಲಭ್ಯಗಳಿಂದ ೧೨ರಿಂದ ೨೨ ಲಕ್ಷ ರೂ.ವರೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅ.೧ರಂದು ಪ್ರತಿಭಟನಾ ಧರಣಿ: ೭ನೇ ವೇತನ ಆಯೋಗದ ಅನುಸಾರ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ರಾಜ್ಯಾದ್ಯಂತ ಏಕಕಾಲಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕಲಬುರಗಿಯಲ್ಲೂ ಅ.೧ರಂದು ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಇಡೀ ದಿನ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಗುರಣ್ಣ ಅವಂಟಿ, ನಾಗಪ್ಪ ನೆಲ್ಲೋಗಿ, ಮಲ್ಲಿಕಾರ್ಜುನ ಮೇತ್ರೆ, ವಸಂತ ಪುಲಾರಿ, ವಿಠಲ್ ಕುಂಬಾರ, ಕೇದಾರನಾಥ ಕುಲ್ಕರ್ಣಿ, ಮಲ್ಲಿಕಾರ್ಜುನ ಬಟ್ನಳ್ಳಿ ಇದ್ದರು.