7ನೇ ವಾರ್ಡ್ ಜನರಿಗಿಲ್ಲ ಸೌಕರ್ಯ, ಕೋಟೆ ಪ್ರದೇಶದಲ್ಲಿ ಬೆಳೆದ ಗಿಡ-ಗಂಟಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಸಂಕಷ್ಟ

31Ward Watch 7 Fort Entrencs Road damege ph 1 A
Published on

ಶಾಂತಮೂರ್ತಿ ದೇವನಹಳ್ಳಿ

ಪಟ್ಟಣದ ಕೋಟೆ ವ್ಯಾಪ್ತಿಯ 7ನೇ ವಾರ್ಡ್ ಹಲವು ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಇದೇ ವಾರ್ಡ್‌ನಲ್ಲಿ ಐತಿಹಾಸಿಕ ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ್ದ ಕೋಟೆ ಇದೆ. ಆದರೂ ಸಮರ್ಪಕ ಸೌಲಭ್ಯ ದಕ್ಕದ ಹಿನ್ನೆಲೆಯಲ್ಲಿ ಕೋಟೆ ಪ್ರವಾಸಿಗರ ಪಾಲಿಗೆ ಮಸುಕಾಗಿದೆ.

ಕೋಟೆ ಹೆಬ್ಬಾಗಿಲಿನ ರಸ್ತೆ ಕಿತ್ತು ಹಳ್ಳಗಳಿಂದ ಆವೃತ್ತವಾಗಿದೆ. ಮಳೆಗಾಲದಲ್ಲಿ ಗುಂಡಿಯಲ್ಲಿ ನೀರು ಸಂಗ್ರಹಗೊಂಡರೆ, ಬೇಸಿಗೆಯಲ್ಲಿ ಧೂಳು ಅನಿವಾರ್ಯ ಎಂಬಂತಾಗಿದೆ.

ಕೋಟೆ ಸುತ್ತಲೂ ಪಾರ್ಥೇನಿಯಂ ಬೆಳೆದಿದ್ದು, ಪುರಾತತ್ವ ಇಲಾಖೆ ತೆರವಿಗೆ ಮುಂದಾದರೆ ಮತ್ತಷ್ಟು ಪ್ರವಾಸಿಗರ ಆಕರ್ಷಣೆ ಸಾಧ್ಯವಾಗಿ ವಾರ್ಡ್ ಅಭಿವೃದ್ಧಿ ಹೊಂದಲಿದೆ.

ವಾರ್ಡ್‌ನ ಕೆಲವೆಡೆ ಚರಂಡಿ ನೀರು ಸರಾಗವಾಗಿ ಹರಿಯದೆ, ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದೆ. ವಾರ್ಡ್‌ನಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಸಾರ್ವಜನಿಕ ಗ್ರಂಥಾಲಯ ಪುರಸಭೆಯ ಹಳೆಯ ಕಟ್ಟಡದಲ್ಲಿದ್ದು, ಇದಕ್ಕೆ ಸ್ವಂತ ಕಟ್ಟಡ ಇಲ್ಲವಾಗಿದೆ. ವಾರ್ಡ್ ಸಮಸ್ಯೆ ಪರಿಹಾರಕ್ಕೆ ಪುರಸಭೆ ಮುಂದಾದರೆ 7ನೇ ವಾರ್ಡ್ ಮಾದರಿಯಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಬೇಕಿದೆ ಕಾಯಕಲ್ಪ: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪೂರ್ವಜರಾದ ದೇವಣ್ಣಗೌಡ, ಮಲ್ಲಬೈರೇಗೌಡ ನಿರ್ಮಿಸಿದ್ದ 600 ವರ್ಷ ಇತಿಹಾಸ ಹೊಂದಿರುವ ಕಲ್ಲಿನಕೋಟೆ, ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದ ಕಲ್ಯಾಣಿ, ಪಟ್ಟಣದ ಪ್ರಧಾನ ದೈವ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ, ಚಂದ್ರಮೌಳೀಶ್ವರ, ಈಶ್ವರ, ಆಂಜನೆಯ, ಸಿದ್ದೇಶ್ವರಸ್ವಾಮಿ ದೇವಾಲಯ, ರಾಘವೇಂದ್ರ ಸ್ವಾಮಿಗಳ ಬೃಂದಾವನ, ಶತಮಾನ ಕಂಡ ಕೋಟೆ ಹಿರಿಯ ಪ್ರಾಥಮಿಕ ಶಾಲೆ, 1954ರಲ್ಲಿ ಕಟ್ಟಲಾದ ಪುರಸಭಾ ಹಳೆಯ ಕಟ್ಟಡವಿದ್ದು, ಐತಿಹಾಸಿಕ ಕುರುಹುಗಳನ್ನು ಉಳಿಸುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆ ಹಾಗೂ ಪುರಸಭೆ ಮುಂದಾಗಬೇಕಿದೆ.

ವಾರ್ಡ್ ಸದಸ್ಯರು ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಕೆಲವೊಂದು ಕಡೆ ಮೋರಿ ಚಿಕ್ಕದಾಗಿರುವುದರಿಂದ ಕೊಳಚೆ ಸರಾಗವಾಗಿ ಹರಿಯುತ್ತಿಲ್ಲ. ಈ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಮುಚ್ಚಿರುವ ವೈಕುಂಠದ್ವಾರ ಪ್ರವೇಶಕ್ಕೆ ಅವಕಾಶ ನೀಡಲು ಮುಂದಾಗಬೇಕು. ಜಿ.ಕೃಷ್ಣಮೂರ್ತಿ ಭಟ್, ವಾರ್ಡ್ ನಿವಾಸಿ ಕೋಟೆ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳಲು ಪುರಾತತ್ವ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಮನ್ವಯ ಸಾಧಿಸಿ ವಾರ್ಡ್ ಅಭಿವೃದ್ಧಿಗೆ ಸಹಕಾರ ನೀಡಬೇಕು. ಗೋಪಾಲ್, ವಾರ್ಡ್ ನಿವಾಸಿ ವಾರ್ಡ್ ಸದಸ್ಯರು ಜನರು ಕಷ್ಟಕ್ಕೆ ಸ್ಪಂದಿಸುತ್ತಿದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಅವರೊಂದಿಗೆ ಕೈಜೋಡಿಸಿದರೆ ಮತ್ತಷ್ಟು ಪ್ರಗತಿ ಸಾಧ್ಯವಾಗಲಿದೆ. ಸುಷ್ಮಾ, ವಾರ್ಡ್ ನಿವಾಸಿ ವಾರ್ಡ್‌ನ ಕೆಲ ಭಾಗದಲ್ಲಿ ಚರಂಡಿ ಮರುನಿರ್ಮಿಸಬೇಕಿದೆ. ಕೋಟೆ ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡಬೇಕಿದೆ. ಇತ್ತೀಚೆಗೆ ಕೋಟೆಯ ಪಾರ್ಶ್ವ ಕುಸಿದಿದೆ. ಇದನ್ನು ಸರಿಪಡಿಸಲು ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಅವಕಾಶ ಕೊಡುತ್ತಿಲ್ಲ. ಶಿಥಿಲವಾಗಿರುವ ಮನೆ ಹೊಸದಾಗಿ ನಿರ್ಮಿಸಲು ಅಡ್ಡಿಪಡಿಸುತ್ತಾರೆ. ನನ್ನ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಪುರಾತತ್ವ ಇಲಾಖೆಯವರೇ ಅಡ್ಡಿಯಾಗಿದ್ದಾರೆ. ಪುಷ್ಪಲತಾ ಲಕ್ಷ್ಮೀನಾರಾಯಣ್, ಸದಸ್ಯೆ, ಪುರಸಭಾ ಉಪಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net