7ತಿಂಗಳಲ್ಲಿ ಕಾಮಗಾರಿ ಪೂರ್ಣ

17cmy5
Published on

ಚಿಂತಾಮಣಿ : ಸುಮಾರು 30 ಕಿ.ಮೀ.ಉದ್ದದ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು 7 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಾಲೂಕಿನಲ್ಲಿ 18 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.6 ವರ್ಷಗಳ ಕಾಲ ಕಾಮಗಾರಿ ನಿರ್ವಹಣೆ ಮಾಡುವುದರ ಜತೆಗೆ 6ವರ್ಷಗಳ ನಂತರ ಮರು ಡಾಂಬರೀಕರಣ ನಡೆಸಲಾಗುತ್ತದೆ, ಇದೊಂದು ಉತ್ತಮ ಯೋಜನೆಯಾಗಿದೆ ಎಂದರು. ಸಂಸದ ಎನ್.ಮುನಿಸ್ವಾಮಿ ಮಾತನಾಡಿ,ಕಾಮಗಾರಿ ಗುಣಮಟ್ಟವನ್ನು ಗ್ರಾಮಸ್ಥರೇ ನೋಡಿಕೊಳ್ಳಬೇಕು, ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ನಮ್ಮ ಗಮನಕ್ಕೆ ತನ್ನಿ ಎಂದರು. 4ನೇ ಹಂತದಲ್ಲಿ 50 ಕಿ.ಮೀ.ರಸ್ತೆಯ ಅಭಿವೃದ್ಧಿಗೆ ಪಟ್ಟಿ ಸಲ್ಲಿಸಿರುವುದಾಗಿ ಹೇಳಿದರು.

ಕೈಗಾರಿಕಾ ವಲಯವಾಗುತ್ತೆ ಚಿಂತಾಮಣಿ : ಚಿಂತಾಮಣಿ ತಾಲೂಕಿನಲ್ಲಿ ಸಾವಿರ ಎಕರೆ ಕೈಗಾರಿಕಾ ಪ್ರದೇಶವನ್ನು ಗುರುತಿಸಿದ್ದು ಮುಂದಿನ ದಿನಗಳಲ್ಲಿ ಚಿಂತಾಮಣಿ ದೊಡ್ಡ ಕೈಗಾರಿಕಾ ವಲಯ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದರು. ಕೋವಿಡ್ ಹಿನ್ನೆಲೆಯಲ್ಲಿ ಐದಾರು ತಿಂಗಳಿನಿಂದ ಕೈಗಾರಿಕಾ ವಲಯದಲ್ಲಿನ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದೆ. ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಹಲವಾರು ಕಂಪನಿಗಳು ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಕೊಡುವ ಮೂಲಕ ಚಿಂತಾಮಣಿ ಬೃಹತ್ ಕೈಗಾರಿಕ ವಲಯ ಆಗಲಿದೆ ಎಂದು ಭರವಸೆ ನೀಡಿದರು.

ಸಂಘಟನೆಗಳ ನಿಷೇಧವಾಗಲಿ: ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಕಿಡಿಗೇಡಿಗಳಿಂದಲೇ ನಷ್ಟ ಪರಿಹಾರ ವಸೂಲಿ ಮಾಡುವುದರ ಜತೆಗೆ ಎಸ್‌ಡಿಪಿಐ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ ಸಂಸದ ಎನ್.ಮುನಿಸ್ವಾಮಿ, ಪೊಲೀಸ್ ಠಾಣೆ ಹಾಗೂ ಶಾಸಕರ ಮನೆಗೆ ಬೆಂಕಿ ಹಾಕಿರುವುದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದರು.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜಿಲ್ಲಾಧಿಕಾರಿ ಅರ್.ಲತಾ, ಎಸ್‌ಪಿ ಮಿಥುನ್ ಕುಮಾರ್, ಜಿಪಂ, ತಾಪಂ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net