7ರಂದು ಡಾ.ಶ್ರೀ ಇಮ್ಮಡಿ ಶಿವಬಸವ ಸ್ವಾಮೀಜಿ ಅವರ 85ನೇ ಜಯಂತಿ ಸಂಸ್ಮರಣೋತ್ಸವ, ಡಾ.ಶರತ್‌ಚಂದ್ರ ಸ್ವಾಮೀಜಿಗಳ ಪಟ್ಟಾಧಿಕಾರ ರಜತ ಮಹೋತ್ಸವ

swamiji web
Published on

ಮೈಸೂರು: ನಗರದ ಚಾಮುಂಡಿಬೆಟ್ಟದ ಪಾದದಲ್ಲಿನ ಕುಂದೂರು ಮಠದ ಗದ್ದುಗೆಯಲ್ಲಿ ಜ.7ರಂದು ಬೆಳಗ್ಗೆ 10.30ಕ್ಕೆ ಡಾ.ಶ್ರೀ ಇಮ್ಮಡಿ ಶಿವಬಸವ ಸ್ವಾಮೀಜಿ ಅವರ 85ನೇ ಜಯಂತಿ ಸಂಸ್ಮರಣೋತ್ಸವ, ಡಾ.ಶರತ್‌ಚಂದ್ರ ಸ್ವಾಮೀಜಿಗಳ ಪಟ್ಟಾಧಿಕಾರ ರಜತ ಮಹೋತ್ಸವ, ವಿದ್ಯಾರ್ಥಿ ನಿಲಯ, ಗ್ರಂಥಾಲಯ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಂದೂರು ಮಠದ ಹಿರಿಯ ವಿದ್ಯಾರ್ಥಿ ಜಿ.ಎಲ್.ತ್ರಿಪುರಾಂತಕ ತಿಳಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ‘ಇಮ್ಮಡಿ ದೀಪ್ತಿ’ ಚಿತ್ರಸಂಪುಟವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆಗೊಳಿಸುವರು. ಗದಗದ ತೋಂಟದಾರ್ಯ ಮಹಾಸಂಸ್ಥಾನ ಮಠದ ಶ್ರೀ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ‘ದಿ ರಿಯಲ್ ಸ್ಟ್ಯಾಂಡ್’ ಕೃತಿ ಬಿಡುಗಡೆಗೊಳಿಸುವರು. ಶ್ರೀಮಠದ ‘ಆ್ಯಪ್’ಅನ್ನು ಕನಕಪುರ ದೇಗುಲ ಮಠದ ಶ್ರೀ ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಸಾಹಿತಿ ನಾಡೋಜ ಗೊ.ರು.ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ನುಡಿ ನಮನ ಸಲ್ಲಿಸುವರು. ‘ಮಿಲಿಂದಪ್ರಶ್ನೆ’ ಕೃತಿಯನ್ನು ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಹಾಗೂ ‘ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ’ ಕೃತಿಯನ್ನು ನವದೆಹಲಿ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಬಿಡುಗಡೆಗೊಳಿಸುವರು. ಸಂಸದ ಪ್ರತಾಪಸಿಂಹ, ಶಾಸಕರಾದ ಟಿ.ಎಸ್.ಶ್ರೀವತ್ಸ, ಗಣೇಶ್ ಪ್ರಸಾದ್, ಮಾಜಿ ಶಾಸಕ ಎಸ್.ಎ.ರಾಮದಾಸ್, ಮಾಜಿ ಎಂಎಲ್‌ಸಿ ತೋಂಟದಾರ್ಯ ಮತ್ತಿತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಹಿರಿಯ ವಿದ್ಯಾರ್ಥಿ ಚನ್ನಪ್ಪ ಮಾತನಾಡಿ, ಶ್ರೀ ಕುಂದೂರು ಮಠವು ಜ್ಞಾನ ಪರಂಪರೆಗೆ ಹೆಸರುವಾಸಿ. ಮಠಾಧೀಪತಿ ಶ್ರೀ ಡಾ.ಇಮ್ಮಡಿ ಶಿವಬಸವ ಸ್ವಾಮೀಜಿ ಅವರು ಮೈಸೂರು ವಿವಿಯ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸಹಸ್ರಾರು ಶಿಷ್ಯರಿಗೆ ಜ್ಞಾನ ಧಾರೆ ಎರೆದಿದ್ದಾರೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಮೂಲ್ಯ ಸಾಹಿತ್ಯ ಮತ್ತು ಸಂಶೋಧನಾ ಕೃತಿಗಳನ್ನು ಕೊಡುಗೆ ನೀಡಿರುವ ಪೂಜ್ಯರು ವಚನ ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬರಡನಪುರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ, ಮುಡಗುಂಡ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಕಾನ್ಯ ಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net