ಆಲೋಚನೆಗಳೇ ವ್ಯಕ್ತಿತ್ವ ನಿರ್ಮಾಣದ ಬುನಾದಿ

CUK
ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ೭ನೇ ಘಟಿಕೋತ್ಸವದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ವಿದ್ಯಾರ್ಥಿನಿಗೆ ಚಿನ್ನದ ಪದಕ ಪ್ರದಾನ ಮಾಡಿ ಪ್ರೋತ್ಸಾಹಿಸಿದರು. ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಡಾ.ಆರ್.ಆರ್.ಬಿರಾದಾರ್ ಇದ್ದರು.
Published on

ಕಲಬುರಗಿ: ಆಲೋಚನೆಗಳೇ ವ್ಯಕ್ತಿತ್ವ ನಿರ್ಮಾಣದ ಭದ್ರ ಬುನಾದಿ. ಹೀಗಾಗಿ ಸಕಾರಾತ್ಮಕ, ಗುಣಾತ್ಮಕ ಚಿಂತನೆಯೊಂದಿಗೆ ಸಾಗಬೇಕಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.

ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ೭ನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಸಕಾರಾತ್ಮಕ ಅಲೋಚನೆಗಳು ನಿಮ್ಮ ನಂಬಿಕೆ ಮೇಲೆ ಬರಲಿವೆ ಎಂಬುದನ್ನು ಮರೆಯದಿರಿ ಎಂದರು.

ಅಭಿವೃದ್ಧಿಗೆ ಬಿಡುಗಡೆಯಾದ ಹಣದಲ್ಲಿ ಶೇ.೫೦ ಸಾರ್ವಜನಿಕರಿಗೆ ಖರ್ಚಾದರೆ ಉಳಿದ ಹಣ ಭ್ರಷ್ಟಾಚಾರಿಗಳ ಕೈ ಸೇರುತ್ತಿದೆ. ಹೀಗಾದರೆ ದೇಶ ಪ್ರಗತಿ ಸಾಧಿಸುವುದೇ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕಿದೆ. ಬದಲಾವಣೆ ಸಮಯ ಬಂದಿದೆ. ಯುವ ಜನತೆ ಸಕಾರಾತ್ಮಕ ಆಲೋಚನೆ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ದೇಶವು ಪ್ರತಿ ಪ್ರಜೆ, ವಿದ್ಯಾರ್ಥಿಗಳಿಂದ ಶ್ರೇಷ್ಠ ಪ್ರದರ್ಶನ ನಿರೀಕ್ಷಿಸುತ್ತದೆ. ಇದು ಶ್ರೇಷ್ಠ ಭಾರತವಾಗಲು ಪೂರಕವಾಗಿದೆ ಎಂದು ಅಭಿಪ್ರಾಯ ಪಡೆದರು.

ಪರಿಣಾಮಕಾರಿ ಕಲಿಕೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಬೇಕಾಗುತ್ತದೆ. ಕಲಿಸುವವರು ಮತ್ತು ಕಲಿಯುವವರ ನಡುವೆ ಸಂಪೂರ್ಣ ಸಮನ್ವಯ ಇರಬೇಕಾಗುತ್ತದೆ. ಶಿಕ್ಷಕನಾದವನು ಸಂಪೂರ್ಣ ಸಿದ್ಧತೆ ಮಾಡಿಕೊಂಡು ತರಗತಿಗೆ ಬರಬೇಕು ಎಂದು ಸಲಹೆ ನೀಡಿದರು.

ಸಿಯುಕೆ ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ, ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಇತರರಿದ್ದರು. ಇದಕ್ಕೂ ಮುನ್ನ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ವಿವಿ ಸಾಗಿ ಬಂದ ದಾರಿ, ಪ್ರಗತಿ ವರದಿ ಮಂಡಿಸಿದರು.

ಪದವಿ ಪ್ರದಾನ: ವಿವಿಧ ಅಧ್ಯಯನ ವಿಭಾಗದ ೨೪೫ ಸ್ನಾತಕಪೂರ್ವ, ೨೮೭ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ೪೭ ಜನರಿಗೆ ಪಿಎಚ್.ಡಿ, ನಾಲ್ವರಿಗೆ ಎಂ.ಫಿಲ್ ನೀಡಲಾಯಿತು. ವಿವಿಧ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ೪೧ ಜನರಿಗೆ ಚಿನ್ನದ ಪದಕ ಮತ್ತು ಪ್ರೊ.ಎ.ಎಂ.ಪಠಾಣ ಗೋಲ್ಡ್ ಮೆಡಲ್ ಆಫ್ ಇಯರ್ ಚಿನ್ನದ ಪದಕಕ್ಕೆ ಭಾಜನರಾದ ಮಾಸ್ಟರ್ ಇನ್ ಟೆಕ್ನಾಲಜಿ ಇನ್ ಇನ್ಫಾರ್ಮೇಷನ್ ಕಮ್ಯುನಿಕೇಷನ್ ಟೆಕ್ನಾಲಜಿ ವಿದ್ಯಾರ್ಥಿನಿ ಬಾವಿಕಡಾ ದಿವ್ಯಾಜ್ಞಾ ಪರವಾಗಿ ಪಾಲಕರಿಗೆ ನ್ಯಾ.ಪಾಟೀಲ್ ಪದಕ ಪ್ರದಾನ ಮಾಡಿದರು.

ದೇಶದಲ್ಲಿ ದಿನೇದಿನೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತ ಹೆಚ್ಚಾಗುತ್ತಿದೆ. ಪರೀಕ್ಷೆ, ನೇಮಕ ಹಗರಣ ಕೇಳಿಬರುತ್ತಿವೆ. ನಮ್ಮಲ್ಲಿನ ಕೆಟ್ಟ ಆಲೋಚನೆಗಳೇ ಇದಕ್ಕೆ ಕಾರಣ. ಸ್ವಾರ್ಥ ಮತ್ತು ತಕ್ಷಣ ಯಶಸ್ಸು ಗಳಿಸಬೇಕೆಂಬ ಅನೈತಿಕ, ಅಶುದ್ಧ ಯೋಚನೆಗಳು ಸಾಮಾಜಿಕ ಅವನತಿಗೆ ಕಾರಣವಾಗಿವೆ. ಇದರಿಂದ ಹೊರಬರಲು ನಮ್ಮಲ್ಲಿ ಶುದ್ಧ, ನೈತಿಕ ಬೀಜ ಬಿತ್ತಬೇಕಿದೆ.
| ನ್ಯಾ.ಬಿ.ಎಸ್.ಪಾಟೀಲ್ ಕರ್ನಾಟಕ ಲೋಕಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net