

ಗಜೇಂದ್ರಗಡ: ಮಹಿಳೆ ಗರ್ಭಕೋಶದ ಬಲಭಾಗದಲ್ಲಿದ್ದ 7 ಕೆಜಿ ಗಾತ್ರದ ಗಡ್ಡೆಯನ್ನು ಪಟ್ಟಣದ ಕಾರುಡಗಿಮಠ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಪಟ್ಟಣದ ಕಾರುಡಗಿಮಠ ಆಸ್ಪತ್ರೆ ವೈದ್ಯರಾದ ವಿಠಲ ತಳವಾರ, ಸುನೀಲಕುಮಾರ ಸಂಗನಾಳ, ಗಗನಾ, ಕಾಶಿನಾಥ ಪೂಜಾರಿ, ನಿಂಗಾರೆಡ್ಡಿ ತಿರಕಣ್ಣವರ, ರೂಪಾ, ಬನದೇವಿ ಬಿರಾದಾರ, ಸೌಭಾಗ್ಯ, ಆನಂದ ಪಾಟೀಲ ಅವರು ಸುಮಾರು ಒಂದು ತಾಸು ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹೊರ ತೆಗೆದಿದ್ದಾರೆ.
ಮಹಿಳೆಯ ಗರ್ಭ ಚೀಲದ ಬಲಭಾಗದಲ್ಲಿ ಬೆಳೆದ ಗಡ್ಡೆ ಎದೆಯವರೆಗೆ ಹಬ್ಬಿತ್ತು. ಇದರಿಂದ ಮಹಿಳೆಗೆ ವಾಂತಿ, ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಇದನ್ನು ಹಾಗೆಯೇ ಬಿಟ್ಟಿದ್ದರೆ ಮಹಿಳೆಗೆ ಊಟದ ಸಮಸ್ಯೆ ಸೇರಿದಂತೆ ಇತರ ಕಾಯಿಲೆಗಳು ಹರಡುವ ಸಾಧ್ಯತೆ ಇತ್ತು. ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಗಾತ್ರದ ಗಡ್ಡೆ ತೆಗೆಯಲಾಗಿದೆ. ಮಹಿಳೆಯ ಜೀವಕ್ಕೆ ಯಾವುದೇ ಅಪಾಯವಿಲ್ಲ. ಇದೀಗ ಆರೋಗ್ಯವಾಗಿದ್ದು, ಗಡ್ಡೆಯನ್ನು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಡಾ. ವಿಠಲ್ ತಳವಾರ ತಿಳಿಸಿದ್ದಾರೆ.