

ಮಂಡ್ಯ: ಸಮಾನತೆ ಮತ್ತು ಸಾಮಾಜಿಕ ನ್ಯಾಯ ರಾಜ್ಯ ಸರ್ಕಾರದ ಮೂಲ ಧ್ಯೇಯವಾಗಿದೆ. ಜನಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಅಗತ್ಯತೆಗಳನ್ನು ಪೂರೈಸುವ ಆಶಯ ಹೊಂದಿದ್ದೇವೆ. ಅಂತೆಯೇ ಐದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆಂಬ ಹೆಗ್ಗಳಿಕೆ ನಮ್ಮ ಸರ್ಕಾರದ ಹೆಮ್ಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಗೆಂದು ಶಕ್ತಿ ಯೋಜನೆಗೆ 411 ಕೋಟಿ ರೂ, ಅನ್ನಭಾಗ್ಯ ಯೋಜನೆಗೆ 402 ಕೋಟಿ ರೂ, ಗೃಹಜ್ಯೋತಿಯಡಿ 445 ಕೋಟಿ ರೂ, ಗೃಹಲಕ್ಷ್ಮೀ ಯೋಜನೆಯಡಿ 1,762.41 ಕೋಟಿ ರೂ ಹಾಗೂ ಯುವನಿಧಿ ಯೋಜನೆಯಡಿ 3.32 ಕೋಟಿ ರೂಗಳನ್ನು ರಾಜ್ಯಸರ್ಕಾರದಿಂದ ನೀಡಲಾಗಿದೆ ಎಂದರು.
ಇದಲ್ಲದೆ ವಿಶ್ವೇಶ್ವರಯ್ಯ ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-1 ಕಾಮಗಾರಿ, ಮದ್ದೂರು ತಾಲೂಕು ಕೆಮ್ಮಣ್ಣುನಾಲೆ ಆಧುನೀಕರಣ ಕಾಮಗಾರಿ, ಲೋಕಸರ ಶಾಖಾ ನಾಲೆಯ ಆಧುನೀಕರಣ ಕಾಮಗಾರಿ, ಹೆಬ್ಬಕವಾಡಿ ಶಾಖಾ ನಾಲೆ ಕಾಮಗಾರಿ, ನಿಡಘಟ್ಟ ಶಾಖಾ ನಾಲೆ ಆಧುನೀಕರಣ ಕಾಮಗಾರಿ ಹಾಗೂ ಸಂಪರ್ಕ ನಾಲೆ ಅಭಿವೃದ್ಧಿ ಕಾಮಗಾರಿಯನ್ನು 667 ಕೋಟಿ ರೂ ವೆಚ್ಚದ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕೆಆರ್‌ಎಸ್ ವ್ಯಾಪ್ತಿಯ ನಾಲೆ, ಪಿಕಪ್ ನಾಲೆ, ಅಚ್ಚುಕಟ್ಟು ರಸ್ತೆ, ತಡೆಗೋಡೆ, ಕೆರೆ ಕಟ್ಟೆ ಹಾಗೂ ಇತರೆ ಅಭಿವೃದ್ಧಿ ಮತ್ತು ದುರಸ್ಥಿ ಕಾಮಗಾರಿಯನ್ನು 204 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿನ ಮುಂಗಾರು ಬೆಳೆಗಾಗಿ ಈಗಾಗಲೇ ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಂಡಂತೆ ರೈತರಿಗೆ ಅನುಕೂಲವಾಗುವಂತೆ ಮುಂಗಾರು ಬೆಳೆಗೆ ನೀರನ್ನು ಹರಿಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ರಸಗೊಬ್ಬರ ಲಭ್ಯತೆಯ ಬಗ್ಗೆ ಗೊಂದಲಗಳನ್ನು ಅನಗತ್ಯವಾಗಿ ಸೃಷ್ಟಿಸಲಾಗುತ್ತಿದೆ. ಆದರೆ, ರಸಗೊಬ್ಬರದ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮುಂಗಾರಿಗೆ ಒಟ್ಟು 28,607 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಲಭ್ಯವಿದೆ. ಇದರಲ್ಲಿ ಯೂರಿಯಾ 4,421 ಮೆಟ್ರಿಕ್ ಟನ್‌ನಷ್ಟಿದೆ. ಆದ್ದರಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ರಸಗೊಬ್ಬರ ಪೂರೈಸಲಾಗುವುದು. ಜಿಲ್ಲೆಯ 5 ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗಿದೆ. ಇದುವರೆಗೂ 5,13,921 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿರುತ್ತದೆ. ಬಹುಮುಖ್ಯವಾಗಿ ಮೈಶುಗರ್ ಕಾರ್ಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸುವ ದೃಷ್ಟಿಯಿಂದ ನಮ್ಮ ಸರ್ಕಾರದಿಂದ 10 ಕೋಟಿ ರೂ ಆರ್ಥಿಕ ನೆರವು ನೀಡಲಾಗಿದೆ. ಅಲ್ಲದೇ, 2023-24 ನೇ ಸಾಲಿನವರೆಗೆ ಹಲವು ವರ್ಷಗಳಿಂದ ಬಾಕಿ ಇದ್ದ 53 ಕೋಟಿ ವಿದ್ಯುತ್ ಬಿಲ್ಲನ್ನು ರಾಜ್ಯಸರ್ಕಾರ ಮನ್ನಾ ಮಾಡಿದೆ ಎಂದರು.
ಒಂದೇ ಸೂರಿನಡಿ ಕೃಷಿ ಹಾಗೂ ಕೃಷಿ ಸಂಬಂಧಿತ ಯೋಜನೆ ಮತ್ತು ತಾಂತ್ರಿಕತೆಗಳ ಮಾಹಿತಿ ಒಳಗೊಂಡ ಸುಸಜ್ಜಿತ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣ ಮಾಡಲು ಪ್ರತಿ ಕೇಂದ್ರಕ್ಕೆ 2 ಕೋಟಿ ರೂನಂತೆ 8 ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು 16 ಕೋಟಿ ರೂ ಮಂಜೂರು ಮಾಡಲಾಗಿದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸಹಾಯಧನದಡಿ ಪಿಎಂಎಫ್‌ಎಂ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆವಿಗೂ 262 ರೈತ ಉದ್ದಿಮೆದಾರರಿಗೆ ಅನುದಾನ ನೀಡಲಾಗಿದ್ದು, ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ ನೀಡಲಾಗುತ್ತಿದ್ದು, ಇದರಲ್ಲಿ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ನದಿ ಮೂಲಗಳಿಂದ ನೀರು ಸರಬರಾಜು ಮಾಡಲು 6 ಬೃಹತ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 1,628 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗುತ್ತಿದೆ. ಅಂತೆಯೇ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾಭ್ಯಾಸ ಮಾಡುತ್ತಿರುವ 6000 ಹೆಣ್ಣು ಮಕ್ಕಳಿಗೆ ಸಿಎಸ್‌ಆರ್ ಅನುದಾನದಡಿ ಮುಟ್ಟಿನ ಕಪ್ ವಿತರಿಸಲಾಗುತ್ತಿದೆ. ಕುಕ್ಕುಟ ಸಂಜೀವಿನಿ ಯೋಜನೆಯಡಿ ಪ್ರತಿ ತಾಲೂಕಿಗೆ 5 ರಂತೆ ಕೋಳಿ ಸಾಕಾಣಿಕೆ ಕೇಂದ್ರವನ್ನು ಸ್ವ-ಸಹಾಯ ಸಂಘಗಳ ಮೂಲಕ ತೆರೆಯಲು ಕ್ರಮ ವಹಿಸಲಾಗಿದೆ ಎಂದರು
ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ನಗರಸಭೆ ಅಧ್ಯಕ್ಷ ಪ್ರಕಾಶ್, ಮುಡಾ ಅಧ್ಯಕ್ಷ ನಯೀಂ ಇತರರಿದ್ದರು.