ಆಕರ್ಷಿಸಿದ 790 ಅಡಿ ತಿರಂಗ ಯಾತ್ರೆ: 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮೆರವಣಿಗೆ

790 feet long Tiranga Yatra Mandya
Published on

ಮಂಡ್ಯ: ಅನನ್ಯ ಹಾರ್ಟ್ ಸಂಸ್ಥೆ, ಅಚೀವರ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಮಿಮ್ಸ್, ಕೆಪಿಎಸ್ ಕಾಲೇಜು, ರೋಟರಿ ಮಂಡ್ಯ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಪುರಸಭೆ ಕಾಲೇಜು ಸಹಯೋಗದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ 790 ಅಡಿ ಉದ್ದದ ಬೃಹತ್ ತಿರಂಗ ಯಾತ್ರೆ ಆಕರ್ಷಿಸಿತು.

ಶಕ್ತಿದೇವತೆ ಕಾಳಿಕಾಂಭ ದೇವಸ್ಥಾನದ ಬಳಿಯಿಂದ ಆರಂಭವಾದ ತಿರಂಗ ಯಾತ್ರೆ ಪೇಟೆ ಬೀದಿ, ಹೊಳಲು ವೃತ್ತ, ಜಯ ಚಾಮರಾಜೇಂದ್ರ ಒಡೆಯರ್ ವೃತ್ತ, ಆರ್.ಪಿ ರಸ್ತೆ ಮಾರ್ಗವಾಗಿ ನೂರಡಿ ರಸ್ತೆ, ಹೊಸಹಳ್ಳಿ ವೃತ್ತದಿಂದ ವಿ.ವಿ ರಸ್ತೆ ಮಾರ್ಗವಾಗಿ ಸರ್ ಎಂ.ವಿ. ಕ್ರೀಡಾಂಗಣ ತಲುಪಿ ಮುಕ್ತಾಯವಾಯಿತು.

790 ಅಡಿ ಉದ್ದದ ತಿರಂಗ ಧ್ವಜವನ್ನು ಹಿಡಿದು ಮುನ್ನಡೆದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತೀಯ ಸೇನೆಗೆ ಜಯಘೋಷ ಕೂಗಿದರು. ದಾರಿಯುದ್ದಕ್ಕೂ ದೇಶ ಪ್ರೇಮದ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಸಾರ್ವಜನಿಕರು ತಿರಂಗ ಧ್ವಜದ ಮೇಲೆ ಪುಷ್ಪವೃಷ್ಟಿ ಸುರಿಸಿ ದೇಶ ಪ್ರೇಮ ಮೆರೆದರು. ಜಿಲ್ಲಾ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ತಿರಂಗ ಯಾತ್ರೆ ಸಂಚರಿಸಿದ ರಸ್ತೆಯುದ್ದಕ್ಕೂ ಪೊಲೀಸ್ ಬಂದೋಬಸ್ತ್ ಮಾಡಿತ್ತು.

ಇದಕ್ಕೂ ಮುನ್ನ ಯಾತ್ರೆಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಸಿಕ್ಕಿ 78 ವರ್ಷ ಪೂರೈಸಿ 79ನೇ ವರ್ಷದ ಆಚರಣೆಗೆ ಅಡಿಯಿಡುತ್ತಿರುವ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪ್ರತಿಯೊಬ್ಬರು ಹೆಮ್ಮೆಪಡುವಂತಹ ವಿಷಯ. ಇಂತಹ ಕಾರ್ಯಕ್ರಮ ಆಯೋಜನೆಯಲ್ಲಿ ಮಂಡ್ಯ ಮುಂಚೂಣಿಯಲ್ಲಿರುತ್ತದೆ ಎಂದರು.

ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹರ್‌ಘರ್ ತಿರಂಗಾ, ಹರ್‌ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯೋತ್ಸವ ಅಭಿಯಾನವನ್ನು ಆಚರಣೆ ಮಾಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರ ಅಂಗವಾಗಿ ತ್ರಿವರ್ಣ ಧ್ವಜದ ತಿರಂಗ ಯಾತ್ರೆಯನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್, ಲಕ್ಷ್ಮೀನಾರಾಯಣ, ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರಮೇಶ್, ಸೋಮೇಗೌಡ, ಸೋಮಣ್ಣ, ರಾಜೇಶ್, ವಿನೋದ್, ರವಿ, ವಿನೋದ್ ಕುಮಾರ್, ಅರವಿಂದ್, ಮಂಜುನಾಥ್, ಬಸವರಾಜು, ಅಚೀವರ್ಸ್ ಶಾಲೆ ಪ್ರಾಂಶುಪಾಲೆ ವಿದ್ಯಾ, ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಮನು ಗೊರವಾಲೆ, ಕೆ.ಪಿ.ಮೃತ್ಯುಂಜಯ, ಕೃಷ್ಣೇಗೌಡ, ಡಿಡಿಪಿಯು ಸಿ.ಚಲುವಯ್ಯ, ಅನನ್ಯ ಸಂಸ್ಥೆಯ ಭಾನು, ಸರಸ್ವತಮ್ಮ, ಡಿ.ಶರೀನಿವಾಸ್, ಜಿಲ್ಲಾ ತಂಬಾಕು ನಿಯಂತ್ರಣದ ಕೋಶದ ಸಲಹೆಗಾರ ತಿಮ್ಮರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net