

ಹುಬ್ಬಳ್ಳಿ: ಮಾದಕ ವಸ್ತು ಮಾರಾಟ, ಖರೀದಿ ಹಾಗೂ ವ್ಯಸನಿಗಳ ಬೆನ್ನು ಬಿದ್ದಿರುವ ಹು-ಧಾ ಪೊಲೀಸ್ ಆಯುಕ್ತಾಲಯವು ಭಾನುವಾರ 156 ಜನರು ಡ್ರಗ್ಸ್ ಸೇವಿಸಿರುವುದನ್ನು ದೃಢಪಡಿಸಿದ್ದಾರೆ. ಇವರಲ್ಲಿ 79 ವಿದ್ಯಾರ್ಥಿಗಳಿರುವುದು ಆತಂಕ ತರಿಸಿದೆ.
ವಾಣಿಜ್ಯ ನಗರಿಯ ವಿವಿಧ ಶಾಲಾ-ಕಾಲೇಜ್‌ನಲ್ಲಿ ಪದವಿ, ಡಿಪ್ಲೋಮಾ, ಎಂಬಿಬಿಎಸ್, ಬಿಟೆಕ್ ಸೇರಿದಂತೆ ವಿವಿಧ ಕೋರ್ಸ್ ಓದುತ್ತಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಹಾನಿಂಗ ನಂದಗಾವಿ ಮಾತನಾಡಿ, ಈಗಾಗಲೇ ಎರಡು ಬಾರಿ ಕಾರ್ಯಾಚರಣೆ ಮಾಡಲಾಗಿತ್ತು. ಇದು ಮೂರನೇ ವಿಶೇಷ ಕಾರ್ಯಾಚರಣೆ. 354 ವ್ಯಸನಿಗಳನ್ನು ವಶಕ್ಕೆ ಪಡೆದು ಕಿಮ್ಸ್ ಮತ್ತು ಡಿಮ್ಹಾನ್ಸ್‌ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅವರಲ್ಲಿ 156 ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ವಿವಿಧ ಶಾಲಾ-ಕಾಲೇಜ್‌ಗಳ 79 ವಿದ್ಯಾರ್ಥಿಗಳಿದ್ದು, 38 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾಡಲಾಗಿತ್ತು ಎಂದರು.
ಡ್ರಗ್ಸ್ ವ್ಯಸನಿಗಳು ಮತ್ತವರ ಪಾಲಕರನ್ನು ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಕರೆಯಿಸಲಾಗಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಕೌನ್ಸೆಲಿಂಗ್ ನಡೆಸಲಾಗಿದೆ. ಪೋಷಕರು ಮತ್ತು ಪಾಲಕರಿಗೆ ಮಕ್ಕಳ ಬಗೆಗೆ ಕಾಳಜಿವಹಿಸುವಂತೆ ತಿಳಿಹೇಳಲಾಗಿದೆ ಎಂದು ವಿವರಿಸಿದರು.
ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಸಿ.ಆರ್. ರವೀಶ, ಎಸಿಪಿಗಳಾದ ಶಿವಪ್ರಕಾಶ ನಾಯಕ, ಉಮೇಶ ಚಿಕ್ಕಮಠ, ವಿನೋದ ಮುಕ್ತೇದಾರ ಹಾಗೂ ವಿವಿಧ ಠಾಣೆಗಳ ಸಿಬ್ಬಂದಿ ಇದ್ದರು.