79 ಕಡೆ ಕಣ್ತೆರೆಯಲಿದೆ ಕೂಸಿನ ಮನೆ

79 sides kusina mane
kusina mane
Published on

ಜಿಪಂ ಮಡಿಲಿಗೆ ನರೇಗಾ ಕೂಲಿಕಾರ್ಮಿಕ ಮಕ್ಕಳು

ನವೆಂಬರ್ ಮೊದಲ ವಾರದಲ್ಲಿ ಚಾಲನೆ

  • ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
    ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ 6 ತಿಂಗಳಿಂದ 3 ವರ್ಷದವರೆಗಿನ ಮಕ್ಕಳ ಪಾಲನೆಗೆ ರಾಜ್ಯ ಸರ್ಕಾರ ರೂಪಿಸಿರುವ ಕೂಸಿನ ಮನೆ ಯೋಜನೆಯಡಿ ಜಿಲ್ಲೆಯಾದ್ಯಂತ 79 ಕಡೆಗಳಲ್ಲಿ ವಿಶೇಷ ಶಿಶುಪಾಲನಾ ಕೇಂದ್ರ ಆರಂಭಿಸಲು ಜಿಪಂ ಅಂತಿಮ ಸಿದ್ಧತೆ ನಡೆಸಿದೆ.
    ಗ್ರಾಮೀಣ ಕೂಲಿ ಕಾರ್ಮಿಕ ಮಕ್ಕಳ ಲಾಲನೆ, ಪೋಷಣೆ, ಪ್ರಾಥಮಿಕ ಶಿಕ್ಷಣ ಹಾಗೂ ಇನ್ನಿತರ ಚಟುವಟಿಕೆಗಳನ್ನು ಒಂದೇ ಸೂರಿನಡಿ ಜಾರಿಗೊಳಿಸಲಾಗುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಜಿಪಂ ಸಕಲ ಸಿದ್ಧತೆ ನಡೆಸಿದ್ದು, ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಕೇಂದ್ರಗಳನ್ನು ಗುರುತಿಸಿದೆ. ನವೆಂಬರ್ ಮೊದಲ ವಾರದಿಂದಲೇ ಶಿಶುಪಾಲನಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ.

79 ಲಕ್ಷ ರೂ. ಅನುದಾನ
ಪ್ರಾಥಮಿಕ ಹಂತದಲ್ಲಿ ಗ್ರಾಮಾಂತರ ಜಿಲ್ಲೆಗೆ ಕೂಸಿನ ಮನೆ ಯೋಜನೆಯಡಿ ಸರ್ಕಾರ 79 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಪ್ರತಿ ಶಿಶುಪಾಲನಾ ಕೇಂದ್ರಕ್ಕೆ 1 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದು, ಇದರಲ್ಲಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪಾಲಕರಿಗೆ ವೇತನ, ಮಕ್ಕಳಿಗೆ ಹಾಲು, ಮೊಟ್ಟೆ ಸೇರಿ ಉಪಾಹಾರ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ವಿನಿಯೋಗಿಸಲಾಗುವುದು. ಮಕ್ಕಳ ದಾಖಲಾತಿ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲು ಜಿಲ್ಲಾ ಪಂಚಾಯಿತಿ ಚಿಂತನೆ ನಡೆಸಿದೆ.

ಜಾಬ್‌ಕಾರ್ಡ್‌ದಾರರೇ ಟೀಚರ್ಸ್‌
ಆಯಾ ಭಾಗದಲ್ಲಿ ನರೇಗಾ ಯೋಜನೆಯಡಿ ಜಾಬ್‌ಕಾರ್ಡ್ ಪಡೆದಿರುವ ಕನಿಷ್ಠ 10ನೇ ತರಗತಿ ಶಿಕ್ಷಣ ಪಡೆದಿರುವ ಮಹಿಳೆಯರನ್ನು ಶಿಶುಪಾಲನಾ ಕೇಂದ್ರದ ಪಾಲನೆಗೆ ನಿಯೋಜಿಸಲಾಗಿದೆ. ಇದಕ್ಕಾಗಿ ಜಿಪಂನ 10 ಮಂದಿಗೆ (ಕೇಕ್ ಟೇಕರ್ಸ್‌) ವಿಶೇಷ ತರಬೇತಿ ನೀಡಲಾಗಿದ್ದು, 10 ಮಂದಿ ಕೇರ್ ಟೇಕರ್ಸ್‌ ಜಿಲ್ಲೆಯ 79 ಕೂಸಿನ ಮನೆಯ ಕೇರ್ ಟೇಕರ್ಸ್‌ಗಳಿಗೆ ತರಬೇತಿ ನೀಡಿದ್ದಾರೆ. ಮಕ್ಕಳ ಪಾಲನೆ, ಅವರ ರಕ್ಷಣೆ ಜವಾಬ್ದಾರಿ ಹೊರೆಸಲಾಗಿದೆ. ತಂಡ ಅಷ್ಟೂ ಜನರ ಮೇಲೆ ಮೇಲ್ವಿಚಾರಣೆ ನಡೆಸಲಿದ್ದು, ಎಲ್ಲಿಯೂ ಲೋಪವಾಗದಂತೆ ಕರ್ತವ್ಯ ನಿರ್ವಹಿಸಲಿದ್ದಾರೆ. ನರೇಗಾ ಯೋಜನೆಯಡಿ 316 ರೂ.ನಂತೆ ವೇತನ ಪಾವತಿ ಮಾಡಲಾಗುವುದು. ಆಯಾ ಭಾಗದಲ್ಲಿ ಎಷ್ಟು ದಿನ ಕರ್ತವ್ಯ ನಿರ್ವಹಿಸುತ್ತಾರೋ ಅಷ್ಟು ದಿನದ ಆಧಾರದಲ್ಲಿ ವೇತನ ಪಾವತಿಯಾಗಲಿದೆ.

ಶೇ.70 ಸರ್ಕಾರಿ ಕಟ್ಟಡ
ಕೂಸಿನ ಮನೆ ಯೋಜನೆಯಡಿ ಎಲ್ಲೆಲ್ಲಿ ನರೇಗಾ ಕಾಮಗಾರಿ ನಡೆಯುತ್ತಿದೆಯೋ ಆಯಾ ಭಾಗದಲ್ಲಿನ ಸರ್ಕಾರಿ ಕಟ್ಟಡಗಳಲ್ಲಿ ಶಿಶುಪಾಲನಾ ಕೇಂದ್ರ ಗುರುತಿಸಲಾಗಿದೆ. ಜಿಲ್ಲೆಯ ಶೇ.70 ಭಾಗದಲ್ಲಿ ಅಂಗನವಾಡಿ ಕಟ್ಟಡ, ಸರ್ಕಾರಿ ಶಾಲೆ, ಸಮುದಾಯ ಭವನ ಸೇರಿ ಇನ್ನಿತರ ಸರ್ಕಾರಿ ಜಾಗಗಳನ್ನು ಅಂತಿಮಗೊಳಿಸಲಾಗಿದೆ. ಉಳಿದ ಶೇ.30 ಕಡೆಗಳಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಶಿಶುಪಾಲನಾ ಕೇಂದ್ರ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕೂಸಿನ ಮನೆ ಯೋಜನೆಯಡಿ ಜಿಲ್ಲೆಗೆ ಈಗಾಗಲೇ 79 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 79 ಕಡೆಗಳಲ್ಲಿ ಕೇಂದ್ರಗಳನ್ನು ಗುರುತಿಸಲಾಗಿದೆ. ಕೇರ್ ಟೇಕರ್ಸ್‌ಗಳನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಲಾಗಿದೆ. ಶೀಘ್ರದಲ್ಲೇ ಯೋಜನೆ ಅನುಷ್ಠಾನಗೊಳ್ಳಲಿದೆ.

ಕೆ.ಟಿ.ರಮೇಶ್, ಜಿಪಂ ಉಪಕಾರ್ಯದರ್ಶಿ


ಬಡಕುಟುಂಬದ ಮಹಿಳಾ ಕೂಲಿ ಕಾರ್ಮಿಕರಿಗೆ ಸಣ್ಣಮಕ್ಕಳ ಪಾಲನೆ ಕಷ್ಟಸಾಧ್ಯವಾಗಿದೆ. ಕೂಲಿಗೆ ತೆರಳಿದ ಬಳಿಕ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲಸದಿಂದ ಮರಳುವವರೆಗೆ ಮಕ್ಕಳು ತಾಯಿಯಿಂದ ದೂರ ಉಳಿಯಬೇಕಾಗುತ್ತದೆ. ಪೌಷ್ಟಿಕ ಆಹಾರದಿಂದ ಮಕ್ಕಳು ವಂಚಿತವಾಗುತ್ತಾರೆೆ. ಇದು ತಾಯಂದಿರ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಸಿನ ಮನೆ ಯೋಜನೆ ಮಹತ್ವ ಪಡೆದುಕೊಂಡಿದೆ.
ನಾಗರಾಜ್, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net