

ಮೈಸೂರು: ಗ್ರಾಮೀಣ ಭಾರತದ ಸರ್ವ ರೀತಿಯ ಅಭಿವೃದ್ಧಿಯಿಂದ ಮಾತ್ರ ವಿಕಸಿತ ಭಾರತ ಮಾಡಲು ಸಾಧ್ಯ ಎಂದು ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಜೆ.ಎಸ್.ವಿಜಯಶ್ರೀ ಹೇಳಿದರು.
ನಗರದ ಎಂಎಂಕೆ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ಮಹನೀಯರ ತ್ಯಾಗ ಬಲಿದಾನದ ಫಲವಾಗಿ ದೇಶವು ಸ್ವಾತಂತ್ರೃ ಪಡೆದಿದೆ. ಸ್ವಾತಂತ್ರೃದ ಮೂಲ ಪರಿಕಲ್ಪನೆಗೆ ಗೌರವಿಸಿ ಮುಂದಿನ ಪೀಳಿಗೆಗೆ ಭವ್ಯ ಭಾರತವನ್ನು ನೀಡಬೇಕಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಪ್ರೊ.ಎನ್.ಭಾರತಿ ಮಾತನಾಡಿ, ಸಾವಿರಾರು ದೇಶಭಕ್ತರ ತ್ಯಾಗ ಬಲಿದಾನದ ಫಲವಾದ ಸ್ವತಂತ್ರ ಭಾರತವು ಇಂದು ಅಭಿವೃದ್ಧಿಯ ಹಾದಿಯಲ್ಲಿದೆ. ದೇಶದ ಸೈನಿಕರು ಮತ್ತು ರೈತರ ಪರಿಶ್ರಮದಿಂದ ನಾವು ಬದುಕನ್ನು ನಡೆಸುತ್ತಿದ್ದು, ಅವರಿಗೆ ಮೊದಲು ನಾವು ಕೃತಜ್ಞರಾಗಿರಬೇಕು. ಗ್ರಾಮೀಣ ಭಾರತದ ಸರ್ವ ರೀತಿಯ ಅಭಿವೃದ್ಧಿಯಿಂದ ಮಾತ್ರ ವಿಕಸಿತ ಭಾರತ ಮಾಡಲು ಸಾಧ್ಯ ಎಂದು ತಿಳಿಸಿದರು.
ಧ್ವಜಾರೋಹಣ ನೆರವೇರಿಸಿದ ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಮಾತನಾಡಿ, ನೆಲಮೂಲ ಸಂಸ್ಕೃತಿ ಅನುಸರಣೆ ಮತ್ತು ರಕ್ಷಣೆಯೊಂದಿಗೆ ದೇಶದ ಸ್ವಾತಂತ್ರೃವನ್ನು ಕಾಪಾಡುವ ಮನಸ್ಥಿತಿ ಇಂದು ಅಗತ್ಯವಾಗಿದೆ. ದೇಶದ ಸಂವಿಧಾನವು ನೀಡಿದ ಮೂಲಭೂತ ಹಕ್ಕುಗಳು, ಕರ್ತವ್ಯಗಳ ಪರಿಪಾಲನೆಯಿಂದ ಸಮಗ್ರ ಭಾರತದ ಅಭ್ಯುದಯವನ್ನು ಕಾಣಲು ಸಾಧ್ಯ ಎಂದರು.
ಬ್ರಿಟೀಷರ ದಾಸ್ಯದಿಂದ ಮುಕ್ತವಾದ ಭಾರತ ಸ್ವಾತಂತ್ರೃವನ್ನು ಪಡೆದು 78 ವರ್ಷಗಳಾಗಿರುವ ಈ ಸಂದರ್ಭದಲ್ಲಿ ದುಡಿಯುವ ಮಹಿಳಾ ವರ್ಗಕ್ಕೆ ಸರ್ವ ಕ್ಷೇತ್ರದಲ್ಲಿಯೂ ಸ್ವಾವಲಂಭನಾ ಸ್ವಾತಂತ್ರೃವೂ ಸಂಪೂರ್ಣವಾಗಿ ದೊರಕಬೇಕು ಎಂದು ತಿಳಿಸಿದರು.
ಇಂದಿನ ಯುವ ಪೀಳಿಗೆಯೂ ಶೈಕ್ಷಣಿಕ ಪ್ರಗತಿಯನ್ನು ಜ್ಞಾನವನ್ನು ಅಂಕಗಳಿಗೆ ಸೀಮಿತಗೊಳಿಸದೆ ಬದುಕಿನ ಭಾಗವಾಗಿ ಬಲಿಷ್ಠಭಾರತವನ್ನು ನಿರ್ಮಿಸಬೇಕಿದೆ ಎಂದರು.
ಐಕ್ಯುಎಸಿ ಸಂಚಾಲಕಿ ಪ್ರೊ.ಕೆ.ಎಸ್.ಸುಕೃತಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಓ.ಎಲ್.ಸುಮಾ, ಮಾಲತಿ ಇತರರಿದ್ದರು. ಇದೇ ವೇಳೆ ವಿದ್ಯಾರ್ಥಿನಿಯರಿಂದ ದೇಶದ ಐಕ್ಯತೆ ಸಾಮರಸ್ಯ ಸಮಗ್ರತೆಗೆ ಸಂಬಂಧಿಸಿಂತೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.