ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ವಿಶೇಷ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೈಗೆತ್ತಿಕೊಂಡ 1288 ಪ್ರಕರಣಗಳಲ್ಲಿ 788 ದೂರುಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿ,17,12,294 ರೂ.ಗಳನ್ನು ಕಕ್ಷಿದಾರರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ.ಮಂಜುನಾಥಾಚಾರಿ ತಿಳಿಸಿದರು.
ಪಟ್ಟಣದ ಜೆಎಂಎ್ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾಗಳ ಸಮಿತಿ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿದರು.
ನ್ಯಾಯಾಲಯದಲ್ಲಿ ಹಾಲಿ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಲಾಗಿದೆ. ಇದರಿಂದ ಕಕ್ಷಿದಾರರಿಗೆ ಸಮಯ ಹಾಗೂ ಆರ್ಥಿಕ ಹೊರೆ ತಪ್ಪಲಿದೆ. ನೆಮ್ಮದಿಯ ಜೀವನಕ್ಕಾಗಿ ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದು ಒಳಿತು ಎಂದರು.
ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚೆಕ್ ಅಮಾನ್ಯದ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳ ಪ್ರಕರಣಗಳ ವಿಚಾರಣೆ ನಡೆಸಲಾಯಿತು. ಲೋಕ ಅದಾಲತ್‌ನ ಮುಖ್ಯ ಉದ್ದೇಶವೆಂದರೆ, ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ಒದಗಿಸುವುದು ಮತ್ತು ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸಹಾಯ ಮಾಡುವುದು ಎಂದರು.
ವಕೀಲರ ಸಂಘದ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಸಿ.ರವಿ, ಕಾರ್ಯದರ್ಶಿ ಜಯಪ್ಪ, ಖಜಾಂಚಿ ಬಿಂದುಕುಮಾರಿ ಹಾಗೂ ನಾಗರಿಕರು ಇದ್ದರು.