

ಗೋಕರ್ಣ: ಜಿಲ್ಲಾ ಆರೋಗ್ಯ ಇಲಾಖೆ ನೊಡೆಲ್ ಅಧಿಕಾರಿ ಡಾ.ರಮೇಶ ರಾವ್ ತಂಡ ಇಲ್ಲಿನ ವಿವಿಧೆಡೆ ವಾಸಿಸುತ್ತಿರುವ ವಿದೇಶಿ ಪ್ರವಾಸಿಗರನ್ನು ಶನಿವಾರ ಭೇಟಿ ಮಾಡಿ ತಪಾಸಣೆ ಕೈಗೊಂಡರು. ಇಲ್ಲಿರುವ ಹೆಚ್ಚಿನ ವಿದೇಶಿಯರ ಹೋಮ್ ಕ್ವಾರೆಂಟೈನ್ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿ ಸ್ಥಿತಿಗತಿಯ ಅವಲೋಕನ ಮಾಡಲಾಯಿತು.
ಈ ಬಗ್ಗೆ ಮಾತನಾಡಿದ ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಗೋಕರ್ಣದಲ್ಲಿರುವ ಹೆಚ್ಚಿನ ವಿದೇಶಿಯರು ಕರೊನಾ ಆತಂಕದಿಂದ ಮುಕ್ತರಾಗಿರುವ ವಿಶ್ವಾಸವಿದೆ. ಇದರ ಜತೆಗೆ ವಿದೇಶಗಳಿಂದ ಇಲ್ಲಿಗೆ ಬಂದವರ ಕುರಿತು ಕೂಡ ಮಾಹಿತಿ ಸಂಗ್ರಹಿಸಿ ಸಿಬ್ಬಂದಿ ಕಾರ್ಯೋನ್ಮುಖರಾಗಲಿದ್ದಾರೆ. ಸದ್ಯ ಗೋಕರ್ಣದಲ್ಲಿ ವಿದೇಶದಿಂದ ಬಂದವರ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರವಾಸಿಗರು ಫ್ರಾನ್ಸ್ಗೆ: ಇಲ್ಲಿದ್ದ 29 ಫ್ರಾನ್ಸ್ ದೇಶದ ಪ್ರವಾಸಿಗರು ಶುಕ್ರವಾರ ರಾತ್ರಿ ಜಿಲ್ಲಾಡಳಿತ ಒದಗಿಸಿದ ವಿಶೇಷ ಬಸ್ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ಫ್ರಾನ್ಸ್ ಸರ್ಕಾರ ಇವರಿಗಾಗಿ ವಿಶೇಷ ವಿಮಾನ ನೀಡಲಿರುವ ಹಿನ್ನೆಲೆಯಲ್ಲಿ ರಾಜ್ಯದ ಉಡುಪಿ, ಮಂಗಳೂರು ಮುಂತಾದೆಡೆಗಳಲ್ಲಿರುವ ಫ್ರಾನ್ಸ್ ಪ್ರವಾಸಿಗರು ಕೂಡ ಇವರನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.