

ತುಮಕೂರು, ಕುಣಿಗಲ್: ಕರೊನಾ ಮಹಾಸ್ಫೋಟಕ್ಕೆ ಜಿಲ್ಲೆ ಬೆಚ್ಚಿದೆ. ಸೋಮವಾರ ಒಂದೇ ದಿನ ಹೊಸದಾಗಿ 78 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 777ಕ್ಕೇರಿದೆ. ಮೂವರು ಕರೊನಾಕ್ಕೆ ಬಲಿಯಾಗಿದ್ದು ಸಾವಿನ ಸಂಖ್ಯೆ 26ಕ್ಕೇರಿದೆ.
ಕುಣಿಗಲ್ ತಾಲೂಕಿನಲ್ಲಿ 24 ತುಮಕೂರು17, ಪಾವಗಡ 10, ಮಧುಗಿರಿ 10, ಕೊರಟಗೆರೆ 8, ಶಿರಾ 6, ತಿಪಟೂರು 2 ಹಾಗೂ ತುರುವೇಕೆರೆಯಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ. ಜಿಲ್ಲಾಸ್ಪತ್ರೆಯಿಂದ ಸೋಮವಾರ 53 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 411 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 341 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 26 ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ.
ಮೂವರು ಬಲಿ: ಜಿಲ್ಲೆಯಲ್ಲಿ ಮೂವರು ಕರೊನಾಕ್ಕೆ ಬಲಿಯಾಗಿದ್ದಾರೆ. ಕುಣಿಗಲ್ ಪಟ್ಟಣದ 40 ವರ್ಷದ ವ್ಯಕ್ತಿ ಜ್ವರ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಭಾನುವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸೋಂಕು ಇರುವುದು ದೃಢಪಟ್ಟಿದೆ. ಉಸಿರಾಟ ತೊಂದರೆ, ಜ್ವರಕ್ಕೆ ತುತ್ತಾಗಿದ್ದ ಶಿರಾದ ಜಮೀಯಾನಗರದ 60 ವರ್ಷದ ವೃದ್ಧೆ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತುಮಕೂರು ಕೆಎಚ್‌ಬಿ ಕಾಲನಿಯ 59 ವರ್ಷದ ಮಹಿಳೆ ಸಹ ತೀವ್ರ ಉಸಿರಾಟ ತೊಂದರೆಯಿಂದಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರ ಸಾವನ್ನಪ್ಪಿದ್ದು ಸೋಮವಾರ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಕುಣಿಗಲ್‌ನಲ್ಲಿ ಹೆಚ್ಚು ಕೇಸ್: ಕುಣಿಗಲ್ ತಾಲೂಕಿನಲ್ಲಿ ಕರೊನಾ ಹೆಚ್ಚು ಪ್ರಕರಣ ಕಂಡು ಬಂದಿದೆ. ತಾಲೂಕಿನಲ್ಲಿ ಒಂದೇ ದಿನ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 63ಕ್ಕೇರಿದೆ. ಈವರೆಗೆ 23 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 38 ಸಕ್ರಿಯ ಪ್ರಕರಣಗಳಿವೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಕುಣಿಗಲ್ ಪಟ್ಟಣ, ಕೋಟೆ, ಸಂತೆಮಾವತ್ತೂರುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸಹಾಯವಾಣಿ ಕೇಂದ್ರ: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರೊನಾ ಹೆಚ್ಚಾಗುತ್ತಿರುವ ಹಿನ್ನೆಯಲ್ಲಿ ಕೋವಿಡ್ ಸಮಸ್ಯೆಗಳನ್ನು ಆಲಿಸಲು ನಗರಪಾಲಿಕೆ ಕಚೇರಿಯಲ್ಲಿ ಕೋವಿಡ್-19 ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಕೋವಿಡ್-19ಕ್ಕೆ ಸಂಬಂಧಪಟ್ಟ ದೂರುಗಳು ಅಥವಾ ಕುಂದುಕೊರತೆಗಳನ್ನು ದೂರವಾಣಿ ಸಂಖ್ಯೆ-9449872599, 0816-2272200 ಅಥವಾ ಇ-ಮೇಲ್ ಠ್ಚ್ಚಿ1್ಚಟಜಿ19ಃಜಞಜ್ಝಿ.್ಚಟಞ ಮೂಲಕ ತಿಳಿಸುವಂತೆ ಪಾಲಿಕೆ ಅಯುಕ್ತೆ ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೀಲ್ ಡೌನ್ ತೆರವುಗೊಳಿಸಿ: ಹುಳಿಯಾರು ಪಟ್ಟಣದ ಗಾಂಧಿ ಪೇಟೆಯ ಸೋಂಕಿತ ವ್ಯಕ್ತಿ ಗುಣಮುಖರಾಗಿ ಮನೆಗೆ ಮರಳಿದರೂ ಈವರೆಗೆ ಸೀಲ್ಡೌನ್ ತೆರವುಗೊಂಡಿಲ್ಲ. ಸೀಲ್‌ಡೌನ್ ಮಾಡಲಾಗಿದ್ದ ಪ್ರದೇಶದಲ್ಲಿ ಸುಮಾರು 10 ಮನೆಗಳಿದ್ದು, ಹಾಲು ತರಕಾರಿ ದಿನಸಿ ಯಾವುದೇ ಸೌಲಭ್ಯಗಳು ಇವರಿಗೆ ದೊರಕಿಲ್ಲ. ತಾಲೂಕು ಆಡಳಿತ ಇನ್ನಾದರೂ ಇತ್ತಕಡೆ ಗಮನಹರಿಸಿ ಸೀಲ್‌ಡೌನ್ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಖಬರಸ್ಥಾನಗಳಲ್ಲಿ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ: ಕರೊನಾದಿಂದ ಮೃತಪಟ್ಟ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಖಬರಸ್ಥಾನ್‌ಗಳಲ್ಲಿ ಮಾಡಲು ಅಡ್ಡಿಪಡಿಸುತ್ತಿರುವವರ ವಿರುಧ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ವಕ್ಫ್ ಮಂಡಳಿ ಆದೇಶ ಹೊರಡಿಸಿದೆ. ಜಿಲ್ಲೆಯ ಮುಸ್ಲಿಂ ಸಮುದಾಯದವರು ಕರೊನಾದಿಂದ ಮೃತಪಟ್ಟವರಿಗೆ ಗೌರವಯುತವಾಗಿ ಆಯಾ ಮಸೀದಿಗಳ ವ್ಯಾಪ್ತಿಯಲ್ಲಿ ಬರುವ ಖಬರಸ್ಥಾನ್‌ಗಳಲ್ಲೇ ಅಂತಿಮ ಸಂಸ್ಕಾರ ನಡೆಸಬೇಕು. ಇದನ್ನು ನಿರಾಕರಿಸಿದ್ದಲ್ಲಿ, ಅಡ್ಡಿಪಡಿಸಿದ್ದಲ್ಲಿ ಸಂಬಂಧಪಟ್ಟ ಖಬರಸ್ಥಾನಗಳ ಆಡಳಿತ ಸಮಿತಿಗಳು, ಮುತವಲ್ಲಿಗಳು ಇಲ್ಲವೇ ಆಡಳಿತಗಾರರನ್ನು ಜವಾಬ್ದಾರರನ್ನಾಗಿ ಮಾಡುತ್ತಾ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಮಧುಗಿರಿಯಲ್ಲಿ ಒಂದೇ ದಿನ 10 ಕೇಸ್: ಮಧುಗಿರಿ ತಾಲೂಕಿನಲ್ಲಿ ಒಂದೇ ದಿನ 10 ಪ್ರಕರಣಗಳು ದೃಡಪಟ್ಟಿವೆ. ಪಟ್ಟಣದ ಗೌರಿಬಿದನೂರು ಗೇಟ್ ಸಮೀಪ 2 ಪ್ರಕರಣ, ಜಾಮಿಯಾ ಮಸೀದಿ ಸಮೀಪ 2, ಚೌಡೇಶ್ವರಿ ಗುಡಿ ಬೀದಿ, ಲಿಂಗೇನಹಳ್ಳಿ ತಲಾ 1 ಪ್ರಕರಣ ವರದಿಯಾಗಿವೆ. ಇನ್ನು ತಾಲೂಕಿನ ಬೂತನಹಳ್ಳಿ, ಆಚೇನಹಳ್ಳಿ, ಕೆರೆಗಳಪಾಳ್ಯ ಹಾಗೂ ಮುದ್ದನೇರಳೇಕೆರೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.