9 ಕ್ಕೂ ಹೆಚ್ಚು ಗ್ರಾಪಂ ಗಳಲ್ಲಿ ಪಿಡಿಒ ಸಂಜಯ ಎನ್​. ಚವಡಾಳ 78.55 ಲಕ್ಷ ಅಕ್ರಮ

29GDG01C
Published on

ಶಿವಾನಂದ ಹಿರೇಮಠ ಗದಗ,

ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನ 9ಕ್ಕೂ ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸಿದ ಓರ್ವ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಸರ್ಕಾರಿ ಬೊಕ್ಕಸದ 78.55 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಎಸಗಿರುವ ಕುರಿತು ಸಮಿತಿ ವರದಿಯು ದೃಢ ಪಡಿಸಿದ ಹಿನ್ನೆಲೆ ಜಿಪಂ ಸಿಇಒ ಸುಶೀಲಾ ಬಿ ಅವರು ಪಿಡಿಒ ಅನ್ನು ಅಮಾನತು ಮಾಡಿದ್ದಾರೆ. ಪಿಡಿಒ ಸಂಜಯ ಚವಡಾಳ ಅಕ್ರಮ ಎಸಗಿ ಅಮಾನತುಗೊಂಡಿರುವ ಆರೋಪಿ.
ಪಿಡಿಒ ಸಂಜಯ ಚವಡಾಳ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಎಸಗಿದ ಹಿನ್ನೆಲೆ ಜಿಪಂ ಮತ್ತು ತಾಪಂ ನಲ್ಲಿ ಗಲವು ದೂರುಗಳು ಸಲ್ಲಿಕೆಯಾಗಿದ್ದರು. ನಾನಾ ದೂರುಗಳು ಸಲ್ಲಿಕೆಯಾ ಹಿನ್ನೆಲೆ ಜಿಪಂ ಮುಖ್ಯ ಯೋಜನಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿ, ಪಿಡಿಒ ಸಂಜಯ ಚವಡಾಳ ಕಾರ್ಯ ನಿರ್ವಹಿಸಿದ 9 ಕ್ಕೂ ಅಧಿಕ ಗ್ರಾಪಂಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ನಂತರ ಜಿಪಂ ಸಿಇಒ ಅವರಿಗೆ ವರದಿ ಸಲ್ಲಿಸಲಾಗಿದೆ. ವರದಿಯಲ್ಲಿ ಪಿಡಿಒ ಸಂಜಯ ಎನ್​. ಚವಡಾಳ ಹಲವು ಅಕ್ರಮ ಎಸಗಿರುವ ಬಗ್ಗೆ ಬಹಿರಂಗ ಗೊಂಡಿದೆ.
ಪತ್ನಿ ಹೆಸರಲ್ಲಿ ಏಜನ್ಸಿ ಸೃಷ್ಟಿಸಿ ಏಜನ್ಸಿ ಖಾತೆಗೆ ಅಕ್ರಮ ಹಣ ವರ್ಗಾವಣೆ, ವೈಯಕ್ತಿಕ ಖಚಿರ್ಗಾಗಿ ಸರ್ಕಾರದ ಲಕ್ಷಾಂತರ ರೂ. ದುರ್ಬಳಕೆ, ಸರ್ಕಾರಿ ಆದೇಶ ಉಲ್ಲಂಘಿಸಿ ಚೆಕ್​ ಮುಖಾಂತರ ಹಣ ಪಾವತಿ, ಗ್ರಾಪಂ ಗಳಲ್ಲಿನ ನಾನಾ ವಸ್ತುಗಳ ಖರೀದಿಯ ವೋಚರ್​ ಮತ್ತು ಬಿಲ್ಲುಗಳನ್ನು ಲೆಕ್ಕಾಧಿಕಾರಿ ತನಿಖೆಗೆ ಒಪ್ಪಿಸದೇ ಇರುವುದು ಸೇರಿದಂತೆ ಸರ್ಕಾರದ ನಾನಾ ಕಾನೂನುಗಳನ್ನು ಉಲ್ಲಂನೆ ಮಾಡಿರುವುದು ಸಮಿತಿಯು ವರದಿಯಲ್ಲಿ ಬಹಿರಂಗಗೊಂಡಿದೆ.

ವರದಿಯಲ್ಲಿ ಪ್ರಸ್ತಾಪಿತ ಅಕ್ರಮಗಳು?

  • ಸಂಜಯ್​ ಕಾರ್ಯನಿರ್ವಹಿಸಿದ ಗ್ರಾಪಂಗಳಲ್ಲಿ ಒಟ್ಟಾರೆ 4.87 ಕೋಟಿ ರೂ. ಆಕ್ಷೇಪಣೆ ಮೊತ್ತ ಹಾಗೂ 7.55 ಲಕ್ಷ ವಸೂಲಾತಿ ಮೊತ್ತ ಉಲ್ಲೇಖ.
  • ಗ್ರಾಪಂ ಕ್ರಿಯಾ ಯೋಜನೆ, ನಗದು ಪುಸ್ತಕ, ಚೆಕ್​ ಕೌಂಟರ್​, ಬಿಲ್ಲುಗಳು, ವೋಚರ್​ಗಳು ಹಾಗೂ ದಾಸ್ತಾನು ವಹಿಗಳನ್ನು ಲೆಕ್ಕ ತನಿಖೆ ಹಾಜರು ಪಡಿಸದೇ ಇರುವ ಕಾರಣ ಸಂಜಯ್​ ನಿಂದ 32.52 ಲಕ್ಷ ವಸೂಲಿಗೆ ಮುಖ್ಯ ಲೆಕ್ಕಾಧಿಕಾರಿಗಳ ಸೂಚನೆ.
  • ಸರ್ಕಾರದ ಆದೇಶ ಉಲ್ಲಂಘಿಸಿ 21.12 ಲಕ್ಷ ರೂ.ಗಳ ಚೆಕ್​ ವ್ಯವಹಾರ.
  • ಮುಂಡರಗಿ ತಾಲೂಕಿನ ವೆಂಕಟಾಪುರ ಗ್ರಾಮದ ಮುಖ್ಯಮಂತ್ರಿ ಮಾದರಿ ಗ್ರಾಮವಿಕಾಸ ಯೋಜನೆಯಲ್ಲಿ 6.93 ಲಕ್ಷ ರೂ.ಗಳನ್ನು ನಿಯಮಬಾಹಿರವಾಗಿ ಸಮೃದ್ಧಿ ಎಂಟರ್​ ಪ್ರಾಯಿಜಿಸ್​ ಗೆ ವರ್ಗಾವಣೆ.
  • ಸಮೃದ್ಧಿ ಎಂಟರ್​ ಪ್ರಾಯಿಜಸ್​ ಗೆ 15 ನೇ ಹಣಕಾಸು ಯೋಜನೆಯಲ್ಲಿ 11.39 ಲಕ್ಷ ನಿಯಮಬಾಹಿರ ವರ್ಗಾವಣೆ, ಕರ್ತವ್ಯಲೋಪ.
  • ಹಳ್ಳಿಕೇರಿ ಗ್ರಾಪಂ ನಲ್ಲಿ ವಿವಿಧ ಏಜನ್ಸಿಗಳಿಗೆ ಸರ್ಕಾರದ ಖರೀದಿ ನಿಯಮ ಉಲ್ಲಂಘಿಸಿ 14.19 ಲಕ್ಷ ಪಾವತಿ
    *ಹಳ್ಳಿಕೇರಿ ಗ್ರಾಪಂ ನಿಂದ ವರ್ಗಾವಣೆಗೊಂಡ ನಂತರವು ಹಳ್ಳಿಕೇರಿಯಲ್ಲಿ ಅಧಿಕಾರಿ ಸ್ವೀಕರಿಸಲು ಮತ್ತೊಬ್ಬ ಪಿಡಿಒ ಗೆ ಅಧಿಕಾರ ಹಸ್ತಾಂತರ ಮಾಡದ ಆರೋಪ.
  • ವೈಯಕ್ತಿಕ ಉದ್ದೇಶಕ್ಕೆ ಸರ್ಕಾರದ 9 ಲಕ್ಷ ಹಣವನ್ನು ದುರ್ಬಳಕೆ

ಬಾಕ್ಸ್​:ಪ್ರಕರಣ ಬೆಳಕಿಗೆ ಬಂದು ಎರಡೂ ತಿಂಗಳು ಕಳೆದರೂ ಮುಂಡರಗಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿಯು(ಇಒ) ಪಿಡಿಒ ಸಂಜಯ್​ ಮೇಲೆ ಪ್ರಕರಣ ದಾಖಲು ಮಾಡಲು ಮೀನಮೇಷ ಎನಿಸುತ್ತಿದ್ದಾರೆ. ಈ ಬಗ್ಗೆ ಜಿಪಂ ಸಿಇಒ ಕೂಡ ಮುಂಡರಗಿ ಇಒ ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೋಟ್​:ಪ್ರಕರಣ ಕುರಿತು ಇಲಾಖಾ ಹಂತದಲ್ಲೂ ಚರ್ಚೆಯಾಗಿದೆ. ಸರ್ಕಾರದ ಹಣ ದುರ್ಬಳಕೆ ಮಾಡಿದ ಯಾವುದೇ ಸಿಬ್ಬಂದಿ ಆಗಿದ್ದರೂ ಕೂಡ ಇಲಾಖಾ ನಿಯಮದಂತೆ ನಿರ್ಧಾರ ಕೈಗೊಳ್ಳಲು ಹಿಂದಡಿ ಇಡುವುದಿಲ್ಲ. ಈ ಕೂಡಲೇ ಗದಗ ಜಿಪಂ ಸಿಇಒ ಅವರಿಗೆ ಮುಂದಿನ ಹಂತದ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ- ಪ್ರೀಯಾಂಕ ಮೇರಿ,ಆಯುಕ್ತರು, ಆರ್​ಡಿಪಿಆರ್​ ಇಲಾಖೆ. ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net