

ಬೆಳಗಾವಿ : ಸ್ವಾತಂತ್ರ್ಯ ಚಳುವಳಿಯು ಜನಸಾಮಾನ್ಯರಿಂದ ಪ್ರಾರಂಭವಾದದ್ದು, ಬೇಧ-ಭಾವರಹಿತ ಸಮಾಜ ನಿರ್ಮಾಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಅದರಂತೆ ಸಪ್ತರ್ಷಿಗಳು ಕಟ್ಟಿದ ಕೆಎಲ್‌ಇ ಸಂಸ್ಥೆ ಇಂದು ವಿಶ್ವದೆತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಅವರಲ್ಲಿ ಬೇಧರಹಿತ ಮತ್ತು ಸಮಾಜಮುಖಿ ಕಾರ್ಯಗಳಿಂದ ಅಭಿವೃದ್ದಿ ಪಥದಲ್ಲಿ ಸಾಗಬೇಕಾಗಿದೆ ಎಂದು ಕಾಹೆರ ಉಪಕುಲಪತಿ ಡಾ.ನಿತಿನ ಗಂಗಾನೆ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಕುಟುಂಬದ ಸದಸ್ಯರಂತೆಯೇ ರೋಗಿಗಳ ಆರೈಕೆ, ಸೇವೆ ಹಾಗೂ ಕಾಳಜಿವಹಿಸಿ, ಗುಣಪಡಿಸುವ ಭರವಸೆಯನ್ನು ನೀಡಿ. ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿ ಇರುವ ಆಸ್ಪತ್ರೆ ಇದಾಗಿದ್ದು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಜಾಗೃತಿವಹಿಸಿ. ನಮ್ಮ ವತಿಯಿಂದ ಸಮೃದ್ಧ ಭರಿತ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸೇವೆ ಸಲ್ಲಿಸಬೇಕಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಅವರು ಮಾತನಾಡಿ, ಸಂಸ್ಥೆಯ ಕಾರ‌್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಸಮರ್ಥ ಮಾರ್ಗದರ್ಶನದೊಂದಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ನಮ್ಮೆಲ್ಲರ ಸಾಮೂಹಿಕ ಶಕ್ತಿ, ಆತ್ಮವಿಶ್ವಾಸ ಹಾಗೂ ಚಾಲನೆಯೊಂದಿಗೆ ನಮ್ಮ ಆಸ್ಪತ್ರೆಯು ಮಾನವೀಯತೆಯ ಸೇವೆಯಲ್ಲಿ ಪ್ರಗತಿಯ ಹಾದಿಯಲ್ಲಿ ಮುಂದುವರೆಯಿಲಿ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ಲೈಪ್‌ಲೈನ್ ಹಾಗೂ ಫೋಕಸ್ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ವಿ.ಡಿ.ಪಾಟೀಲ, ಕಾಹೆರ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಡಾ.ಆರ್.ಬಿ.ನೇರ್ಲಿ ಸೇರಿದಂತೆ ಇತರಿದ್ದರು.