

ಚಿಕ್ಕಮಗಳೂರು: ಜಿಲ್ಲೆಯ ನಗರ ಪ್ರದೇಶದ ಉದ್ಯಮಗಳ ಸಂಖ್ಯೆ ಕಡಿಮೆಯಾಗಲು ನಿಗದಿತ ಸಮಯದೊಳಗೆ ಸೂಕ್ತ ಕಾರಣ ನೀಡುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ 7ನೇ ಆರ್ಥಿಕ ಗಣತಿಯ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಉದ್ಯಮ:
6ನೇ ಆರ್ಥಿಕ ಗಣತಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 54,218 ಮತ್ತು ನಗರ ಪ್ರದೇಶಗಳಲ್ಲಿ 18,266 ಸೇರಿ 72,484 ಉದ್ಯಮಗಳಿದ್ದವು. 7ನೇ ಆರ್ಥಿಕ ಗಣತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 63,491 ಮತ್ತು ನಗರ ಪ್ರದೇಶದಲ್ಲಿ 10,493 ಸೇರಿ 73,984 ಉದ್ಯಮಗಳು ಕಂಡು ಬಂದಿವೆ. ಕಳೆದ ಬಾರಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾರಿಕೆಗಳು ಸೇರಿ 1,500 ಉದ್ಯಮಗಳು ಹೆಚ್ಚಾಗಿವೆ. ಆದರೆ ನಗರ ಪ್ರದೇಶಗಳಲ್ಲಿ 7,773 ಉದ್ಯಮಗಳು ಕಡಿಮೆಯಾಗಿವೆ. ತರೀಕೆರೆ, ಎನ್.ಆರ್.ಪುರ, ಕೊಪ್ಪ ತಾಲೂಕುಗಳಲ್ಲಿ ಸಂಖ್ಯೆ ಕಡಿಮೆಯಾಗಲು ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು.
ಗಣತಿ ಸಮರ್ಪಕವಿರಲಿ:
ಜಿಲ್ಲೆಯ 1,117 ಗ್ರಾಮಗಳಲ್ಲಿ ಹಾಗೂ 9 ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ಗಣತಿ ಕೈಗೊಳ್ಳಲಾಗಿದ್ದು ಆರ್ಥಿಕ ಗಣತಿ ವೇಳೆ ಯಾವುದೇ ಉದ್ಯಮಗಳನ್ನು ಗಣತಿಯಿಂದ ಹೊರಗುಳಿಯದಂತೆ ಗಮನಹರಿಸಬೇಕು. ಗಣತಿಯಿಂದ ಸಂಗ್ರಹಿಸಲಾದ ಮಾಹಿತಿಗಳನ್ನಾಧರಿಸಿ ವಿವಿಧ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಮತ್ತು ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ವಿಮೆ, ಕಾರ್ಮಿಕ ಭವಿಷ್ಯ ನಿಧಿ, ಆರೋಗ್ಯ ವಿಮೆ ಇನ್ನಿತರೆ ಅಂಶಗಳನ್ನು ನಿರ್ಧರಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಆರ್ಥಿಕ ಗಣತಿಯನ್ನು ಜವಾಬ್ದಾರಿಯಿಂದ ಮಾಡಬೇಕು ಎಂದರು.
ಮೊಬೈಲ್ ಆ್ಯಪ್ ಮೂಲಕ ಗಣತಿ:
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಬಿ.ಕರೇಗೌಡ ಮಾತನಾಡಿ, 1977ರಿಂದ ಏಳು ಆರ್ಥಿಕ ಗಣತಿ ಕೈಗೊಂಡಿದ್ದು, ಆರು ಗಣತಿಯನ್ನು ಅಂಗನವಾಡಿ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಾಗಿತ್ತು. 7ನೇ ಆರ್ಥಿಕ ಗಣತಿಯನ್ನು 133 ಮೇಲ್ವಿಚಾರಕರು ಹಾಗೂ 719 ಗಣತಿದಾರರ ಮೂಲಕ ಪ್ರಥಮ ಬಾರಿಗೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೊಬೈಲ್ ಆ್ಯಪ್ ಮೂಲಕ ನಡೆಸಲಾಗಿದೆ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ತಿರುಮಲೇಶ್, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸಿದ್ಧರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ ಇದ್ದರು.