77 ಕಿಮೀ ಮಾನವ ಸರಪಳಿ ನಿರ್ಮಿಸಿ ದಾಖಲೆ

11111
Published on

ಏಕಕಾಲಕ್ಕೆ ಎರಡು ಕಡೆ ಆಯೋಜನೆ, 60 ಸಾವಿರಕ್ಕೂ ಹೆಚ್ಚು ಕೈಗಳ ಸಮಾಗಮ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ಬರೋಬ್ಬರಿ 77 ಕಿಮೀ ಮಾನವ ಸರಪಳಿ ರಚಿಸಿ ಜಿಲ್ಲಾಡಳಿತ ದಾಖಲೆ ಮಾಡಿದೆ.
ಜಿಲ್ಲೆಯಲ್ಲಿ ಏಕಕಾಲಕ್ಕೆ ಎರಡು ಕಡೆ ಮಾನವ ಸರಪಳಿ ರಚನೆಯಾಗಿದ್ದು, ಮೊದಲ ಭಾಗದಲ್ಲಿ ನೆಲಮಂಗಲ ತಾಲೂಕಿನ ಹಳೇನಿಜಗಲ್‌ನಿಂದ ಪ್ರಾರಂಭವಾಗಿ ದಾಬಸ್‌ಪೇಟೆ ಮುಖಾಂತರ ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಕ್ರಾಸ್‌ವರೆಗೆ 54 ಕಿಲೋ ಮೀಟರ್ ಸರಪಳಿ ರಚನೆಯಾಗಿದೆ. ಎರಡನೇ ಭಾಗದಲ್ಲಿ ಹೊಸಕೋಟೆ ತಾಲೂಕಿನ ವೆಂಕಟಪುರದಿಂದ ಪ್ರಾರಂಭಿಸಿ ಮುಗಬಾಳ ಮುಖಾಂತರ ಹೊಸಕೋಟೆಯ ದೊಡ್ಡಮಾನಿಕೆರೆಯವರೆಗೆ 23 ಕಿಲೋಮೀಟರ್ ಸೇರಿ ಒಟ್ಟು 77 ಕಿಲೋಮೀಟರ್‌ವರೆಗೆ 60 ಸಾವಿರಕ್ಕೂ ಹೆಚ್ಚು ಜನ ‘ಮಾನವ ಸರಪಳಿ’ ನಿರ್ಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

ಸರ್ವ ಶ್ರೇಷ್ಠ ಸಂವಿಧಾನ ಕೊಡುಗೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಎಲ್ಲ ವರ್ಗದ ಜನರು ಭಾವೈಕ್ಯತೆಯಿಂದ ಬದುಕಬೇಕು. ಆಗಲೇ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರ ವೃತ್ತದ ಬಳಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಬೀದರ್‌ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿ ರಚಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 77 ಕಿಲೋಮೀಟರ್ ಉದ್ದದ ಬೃಹತ್ ಮಾನವ ಸರಪಳಿ ರಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ ಎಂದರು.
ಸಂವಿಧಾನದ ಉಳಿವು ಹಾಗೂ ಪ್ರಜಾಪ್ರಭುತ್ವದ ರಕ್ಷಣೆ ಇದರ ಮೂಲ ಉದ್ದೇಶವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಜಾತ್ಯತೀತ ಭಾವನೆಯಿಂದ ಬದುಕಲು ಸಂವಿಧಾನ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಹಾತ್ಮಾ ಗಾಂಧಿಜೀಯವರ ಕನಸು ಸಹ ಆಗಿತ್ತು ಎಂದು ಹೇಳಿದರು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ, ತಾಲೂಕು ತಹಸೀಲ್ದಾರ್‌ಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.


ಸಮಾನತೆ ಬೆಳೆಯಲಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಮಾನತೆ ಸಿಗುವಂತಾಗಬೇಕು. ಯಾವುದೇ ಭೇದ ಭಾವ ಇಲ್ಲದೆ ನಾವೆಲ್ಲರೂ ಒಂದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ರಾಜ್ಯದ ಹಿತಕ್ಕಾಗಿ ಒಟ್ಟಾಗಿ ದುಡಿಯಬೇಕು. ಆಡಂಬರದ ಆಚರಣೆ ಮಾಡದೆ ಸಂವಿಧಾನದ ಆಶಯದ ಬಗ್ಗೆ ತಿಳಿಸುವ ಕಾರ್ಯಕ್ರಮ ಇದಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅಂತಾರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಸಂವಿಧಾನ ಅಳವಡಿಸಿಕೊಂಡಿರುವ ವಿಶ್ವದ ಪ್ರಜಾಪ್ರಭುತ್ವ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಭಾರತ ವಿಶ್ವದಲ್ಲಿಯೇ ದೊಡ್ಡ ಸಂವಿಧಾನ ಹೊಂದಿರುವ ದೇಶ. ನಮ್ಮ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟು ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.ಡಾ.ಶಿವಶಂಕರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net