10 ದಿನದಲ್ಲಿ ಶೇ.77 ಸೋಂಕಿತರು!

Seal Down
Published on

| ಸತೀಶ್ ಕೆ.ಬಳ್ಳಾರಿ ಬೆಂಗಳೂರು

ರಾಜಧಾನಿಯಲ್ಲಿ ಜೂ.28ರಿಂದ ಕರೊನಾ ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಹಿಂದಿನ ಹತ್ತು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಶೇ.77 (8,822) ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಅತಿಹೆಚ್ಚು ಪ್ರಕರಣಗಳು ಪತ್ತೆಯಾದ ವಾರ್ಡ್​ಗಳನ್ನು ಬಿಬಿಎಂಪಿ ಗುರುತಿಸಿದೆ. ಶಾಂತಲಾನಗರ, ಚಾಮರಾಜ ಪೇಟೆ, ಧರ್ಮರಾಯಸ್ವಾಮಿ ದೇವಸ್ಥಾನ, ಗಾಂಧಿನಗರ, ಕೃ.ರಾ. ಮಾರುಕಟ್ಟೆ, ಸಂಪಂಗಿರಾಮನಗರ, ಬಸವನಗುಡಿ, ಚಿಕ್ಕಪೇಟೆ, ಹೊಂಬೇಗೌಡನಗರ (ವಿಲ್ಸನ್ ಗಾರ್ಡನ್), ಪಟ್ಟಾಭಿರಾಮನಗರ, ರಾಜರಾಜೇಶ್ವರಿನಗರ, ಬಾಣಸವಾಡಿ ಹಾಗೂ ವಿಶ್ವೇಶ್ವರಪುರ ಸೇರಿ 15 ವಾರ್ಡ್ ಗಳಲ್ಲಿ ಅತಿಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ 6,440 ಅಂದರೆ ಶೇ.77 ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ದಕ್ಷಿಣ ವಲಯ ಶೇ.26, ಪಶ್ಚಿಮ ವಲಯ ಶೇ.25 ಮತ್ತು ಪೂರ್ವ ವಲಯದಲ್ಲಿ ಶೇ.22 ಸೋಂಕಿತರಿದ್ದಾರೆ. ಉಳಿದಂತೆ, ಬೊಮ್ಮನಹಳ್ಳಿಯಲ್ಲಿ ಶೇ.8, ಆರ್.ಆರ್.ನಗರ ಶೇ.7, ಮಹದೇವಪುರ ಶೇ.6, ಯಲಹಂಕ ಶೇ.4 ಹಾಗೂ ದಾಸರಹಳ್ಳಿಯ ಶೇ. 2 ಪ್ರಕರಣ ಕಂಡುಬಂದಿವೆ. ಕಳೆದ ವಾರದಿಂದ ಶಾಂತಲಾನಗರ ವಾರ್ಡ್​ನಲ್ಲಿ ಪ್ರತಿನಿತ್ಯ ಸರಾಸರಿ 50ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ನಿರ್ಲಕ್ಷ್ಯ ಬೇಡ: ನಗರದ ಕೇಂದ್ರ ಭಾಗಗಳಲ್ಲಿ ತರಕಾರಿ, ದಿನಸಿ, ಹೂವು, ಬಟ್ಟೆ, ಮೊಬೈಲ್ ಸೇರಿ ಎಲ್ಲ ರೀತಿಯ ವ್ಯಾಪಾರ ವಹಿವಾಟು ಎಗ್ಗಿಲ್ಲದೆ ನಡೆಯುತ್ತಿದೆ. ಸಾರ್ವಜನಿಕರು ಸೀಲ್​ಡೌನ್ ಪ್ರದೇಶದಲ್ಲಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿರುವುದು, ಗುಂಪುಗೂಡುವುದು ಅವ್ಯಾಹತವಾಗಿ ನಡೆದಿದೆ. ಇದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿಸಿದೆ. ಕೃ.ರಾ. ಮಾರುಕಟ್ಟೆ, ಕಲಾಸಿಪಾಳ್ಯ, ಚಿಕ್ಕಪೇಟೆ, ವಿಶ್ವೇಶ್ವರಪುರ ಮತ್ತು ಚಾಮರಾಜಪೇಟೆ ವಾರ್ಡ್ ಗಳ ಸೀಲ್​ಡೌನ್ ಪ್ರದೇಶಗಳಲ್ಲಿ ರ್ಯಾಂಡಂ ಪರೀಕ್ಷೆ ನಡೆಯುತ್ತಿದೆ. ಅನಾರೋಗ್ಯ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ತಪಾಸಣೆ ಮಾಡಿಸಿಕೊಳ್ಳುವಂತೆ ಪಾಲಿಕೆ ಆರೋಗ್ಯಾಧಿಕಾರಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಉಳಿದ ನಗರ ಮೀರಿಸುವುದೆ?

ರಾಜ್ಯದಲ್ಲಿ ಮೊದಲ ಬಾರಿಗೆ ಮಾ.8ರಂದು ಬೆಂಗಳೂರಿನಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತು. 120 ದಿನಗಳಲ್ಲಿ (ಜು.7ರವರೆಗೆ) 11,361 ಜನರಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲೂ ಕೇವಲ 10 ದಿನಗಳಲ್ಲಿ 8,822 (ಶೇಕಡ 77.65) ಮಂದಿಗೆ ತಗುಲಿದೆ. ಇದೇ ರೀತಿ ಹೆಚ್ಚಳವಾಗುತ್ತ ಸಾಗಿದಲ್ಲಿ ದೇಶದ ಅತ್ಯಂತ ಹೆಚ್ಚು ಸೋಂಕಿತರು ವರದಿಯಾಗಿರುವ ಮುಂಬೈ, ಕೋಲ್ಕತ, ಚೆನ್ನೈ ನಗರಗಳನ್ನು ಸಿಲಿಕಾನ್ ಸಿಟಿ ಬೆಂಗಳೂರು ಕೆಲವೇ ದಿನಗಳಲ್ಲಿ ಮೀರಿಸುವ ಲಕ್ಷಣಗಳು ಕಂಡುಬರುತ್ತಿವೆ.

31ರವರೆಗೆ ಮಾರುಕಟ್ಟೆಗಳು ಬಂದ್

ಬೆಂಗಳೂರು: ಕಲಾಸಿಪಾಳ್ಯ ಹಾಗೂ ಕೆ.ಆರ್. ಮಾರುಕಟ್ಟೆ ಸುತ್ತಲಿನ ಪ್ರದೇಶಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ವರ್ತಕರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜು.31ರವರೆಗೆ ಮಾರುಕಟ್ಟೆ ಬಂದ್ ಮಾಡುವಂತೆ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಚಿಕ್ಕಪೇಟೆ, ಕಲಾಸಿಪಾಳ್ಯ, ಕೆ.ಆರ್. ಮಾರುಕಟ್ಟೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಕಾಟನ್ ಪೇಟೆ, ಸುಲ್ತಾನ್​ಪೇಟೆ ಅಕ್ಕಪಕ್ಕದ ಬಡಾವಣೆಗಳಲ್ಲಿ ಕರೊನಾ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿವೆ. ಪ್ರಕರಣಗಳು ಕಡಿಮೆಯಾದಲ್ಲಿ ಮಾರುಕಟ್ಟೆ ವರ್ತಕರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜು.31ರವರೆಗೆ ಸೀಲ್​ಡೌನ್ ಮಾಡಲು ಆಯುಕ್ತರು ಸೂಚಿಸಿದ್ದಾರೆ.

ಗರ್ಭಿಣಿಯರ ಚಿಕಿತ್ಸೆಗೆ 24 ಹಾಸಿಗೆ ಮೀಸಲು

ಬೆಂಗಳೂರು: ನಗರದಲ್ಲಿ ಕೋವಿಡ್-19 ಶಂಕೆಯಿರುವ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಹಾಗೂ ಶಸ್ತ್ರಚಿಕಿತ್ಸೆಯ ಹೆರಿಗೆ ಸೌಲಭ್ಯಕ್ಕೆ ವಿಲ್ಸನ್ ಗಾರ್ಡನ್ ಆಸ್ಪತ್ರೆಯಲ್ಲಿ 24 ಹಾಸಿಗೆ ವ್ಯವಸ್ಥೆ ಮಾಡಿರುವ ಕುರಿತು ಬಿಬಿಎಂಪಿ ಮುಖ್ಯ ಅರೋಗ್ಯ ಅಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಆದೇಶ ಹೊರಡಿಸಿದ್ದಾರೆ. ನಗರದ ವಿವಿಧ ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ತಪಾಸಣೆ ಮತ್ತು ಹೆರಿಗೆ ಮಾಡಿಸಲಾಗುತ್ತಿದೆ. ಆದರೆ, ಅವರಲ್ಲಿಯೂ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆರಿಗೆ ದಿನಾಂಕದ 15 ದಿನ ಮೊದಲೇ ಕರೊನಾ ತಪಾಸಣೆ ಮಾಡಲಾಗುತ್ತದೆ. ಕೆಲವು ವೇಳೆ ಹೆರಿಗೆ ನಂತರ ಅಥವಾ ಬಾಣಂತಿಯರಿಗೆ ಸೋಂಕು ಕಂಡುಬಂದಲ್ಲಿ ಆ ಆಸ್ಪತ್ರೆಗಳನ್ನು ಒಂದು ದಿನ ಸೀಲ್​ಡೌನ್ ಮಾಡಿ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಇದರಿಂದ ಅಲ್ಲಿ ಚಿಕಿತ್ಸೆ ಪಡೆಯುವವರಿಗೆ ತೊಂದರೆ ಆಗುವುದನ್ನು ತಪ್ಪಿಸಲು ವಿಲ್ಸನ್ ಗಾರ್ಡನ್ ಆಸ್ಪತ್ರೆಯಲ್ಲಿ 24 ಹಾಸಿಗೆಗಳನ್ನು ತೆರೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net