ತುಮಕೂರು ಜಿಲ್ಲೆಯಲ್ಲಿವೆ 763 ಸಕ್ರಿಯ ಕರೊನಾ ಪ್ರಕರಣ

Corona
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿಸಿದ್ದು, ಬುಧವಾರ 63 ಜನರಿಗೆ ಸೋಂಕು ದೃಢಪಟ್ಟಿದೆ. ಹುಳಿಯಾರು ಪಟ್ಟಣದಲ್ಲಿ 36 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಸತತ 4 ದಿನವೂ ಶತಕ ಬಾರಿಸಿದ್ದ ಕರೊನಾ ಸಂಖ್ಯೆ ಬುಧವಾರ ಕಡಿಮೆಯಾಗಿದೆಯಾದರೂ ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗುವ ಆತಂಕವಿದೆ, ಈವರೆಗೆ ಜಿಲ್ಲೆಯಲ್ಲಿ 1536 ಪ್ರಕರಣ ದೃಢವಾಗಿದೆ. ತುಮಕೂರು ತಾಲೂಕಿನಲ್ಲಿ 32 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದೊಂದೇ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 667ಕ್ಕೇರಿಕೆಯಾಗಿದೆ. ಕುಣಿಗಲ್-7, ಪಾವಗಡ-2, ತುರುವೇಕೆರೆ-4, ತಿಪಟೂರು-1, ಮಧುಗಿರಿ-5, ಶಿರಾ-4 ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 8 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬುಧವಾರ ಕೋವಿಡ್ ಆಸ್ಪತ್ರೆಗಳಿಂದ 44 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 725 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು 763 ಸಕ್ರಿಯ ಪ್ರಕರಣಗಳಿವೆ. 48 ಸಾವು ಜಿಲ್ಲೆಯಲ್ಲಿರುವ ಜನರ ಭಯಕ್ಕೆ ಕಾರಣವಾಗಿದೆ. ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದ ಹುಳಿಯಾರು ಪಟ್ಟಣದ 36 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಈಗ ಅವರ ಪತ್ನಿ ಹಾಗೂ ಮಗುವಿಗೂ ಸೋಂಕು ದೃಢವಾಗಿದ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ತೀವ್ರ ಜ್ವರ, ಕಫ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹುಳಿಯಾರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಜು.28ರಂದು ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನಂತರ ಗಂಟಕದ್ರವ ಪರೀಕ್ಷೆ ನಡೆಸಿದಾಗ ಸೋಂಕು ದೃಢವಾಗಿದೆ ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ತಿಳಿಸಿದರು.

ಮೂವರು ಪೊಲೀಸರಿಗೆ ಸೋಂಕು: ಕರೊನಾ ಸೋಂಕು ಬುಧವಾರ ಮತ್ತೆ ಮೂವರು ಪೊಲೀಸರಿಗೆ ಕಾಣಿಸಿಕೊಂಡಿದೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಒಬ್ಬರು ಹಾಗೂ ಕ್ಯಾತಸಂದ್ರ ಠಾಣೆಯ ಇಬ್ಬರು ಸಿಬ್ಬಂದಿಗೆ ಸೋಂಕು ದೃಢವಾಗಿದೆ. 4 ಮಕ್ಕಳು, 60 ವರ್ಷ ಮೇಲ್ಪಟ್ಟ ನಾಲ್ವರಿಗೂ ಸೋಂಕು ತಗುಲಿರುವುದು ಆತಂಕ ಮೂಡಿಸಿದೆ.

ಎಲ್ಲೆಲ್ಲಿ ಸೋಂಕು?: ಮಧುಗಿರಿ ತಾಲೂಕು ಅಮರಾವತಿಯ 4 ಹಾಗೂ 8 ವರ್ಷದ ಬಾಲಕರು, 27 ವರ್ಷದ ಮಹಿಳೆ, 24 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಚಿಕ್ಕನಾಯಕನಹಳ್ಳಿ ತಾಲೂಕು ಹೋಯ್ಸಳಕಟ್ಟೆ, ಹುಳಿಯಾರು ಪಟ್ಟಣ(2), ಬರಗಿಹಳ್ಳಿಯಲ್ಲಿ 20 ವರ್ಷದ ಯುವತಿ, ಕುಣಿಗಲ್ ತಾಲೂಕು ಬೊಮ್ಮಡಿಗೆರೆ, ಜಲಧಿಗೆರೆ ಕಾಲನಿ, ಕುಣಿಗಲ್ ಟೌನ್ ಸೇರಿ 63 ಜನರಿಗೆ ಸೋಂಕು ದೃಢವಾಗಿದ್ದು ಎಲ್ಲರನ್ನೂ ಕೋವಿಡ್ ಸೆಂಟರ್‌ಗಳಿಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net