ವಾರದಲ್ಲೇ ವಾಡಿಕೆಗಿಂತ ಶೇ.76 ಅಧಿಕ ಮಳೆ:5 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್

dvg-rain-17.jpg
Published on

ಬೆಂಗಳೂರು: ವಾರದಿಂದ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜು.12ರಿಂದ ಜು.18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 64 ಮಿಮೀ ಮಳೆ ಸುರಿಯಬೇಕಿತ್ತು. ಆದರೆ, 113 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.76 ಹೆಚ್ಚು ವರ್ಷಧಾರೆಯಾಗಿದೆ.

ಕರಾವಳಿಯಲ್ಲಿ ಶೇ.85, ಮಲೆನಾಡಲ್ಲಿ ಶೇ.104, ಉತ್ತರ ಕರ್ನಾಟಕದಲ್ಲಿ ಶೇ.25 ಹಾಗೂ ದಣ ಕರ್ನಾಟಕದಲ್ಲಿ ಶೇ.57 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಗಮನಾರ್ಹ. 11 ಜಿಲ್ಲೆಗಳಲ್ಲಿ ಅಧಿಕವಾಗಿ ಮಳೆಯಾದರೆ, 6 ಜಿಲ್ಲೆಗಳಲ್ಲಿ ತುಸು ಹೆಚ್ಚು, 11 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಸುರಿದಿದೆ. ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ವಿಜಯನಗರ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ವರುಣಾರ್ಭಟ ಮುಂದುವರಿಕೆ:

ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್​ ಅರ್ಲಟ್​ ಕೊಟ್ಟಿದೆ. ಜು.6ರಿಂದ ಈ ಮೇಲಿನ ಪ್ರದೇಶಗಳಲ್ಲಿ ರೆಡ್​, ಆರೆಂಜ್​ ಅರ್ಲಟ್​ ನೀಡಲಾಗುತ್ತಿದೆ. ಕೊಡಗಿನಲ್ಲಿ ಜು.19ರಿಂದ ಜು.20ರವರೆಗೆ ಆರೆಂಜ್​ ಅರ್ಲಟ್​ ಇದ್ದರೆ, ಬೆಳಗಾವಿ, ಬೀದರ್​, ಧಾರವಾಡ, ಕಲಬುರಗಿ, ಯಾದಗಿರಿ, ಹಾಸನದಲ್ಲಿ ಮುಂದಿನ 48 ಗಂಟೆ ಯೆಲ್ಲೋ ಅರ್ಲಟ್​ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net