75ನೇ ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಸಿದ್ಧತೆಗೆ ಡಿಸಿ ಸೂಚನೆ

75ನೇ ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಸಿದ್ಧತೆಗೆ ಡಿಸಿ ಸೂಚನೆ
Published on

ಹಾಸನ: ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಜ.26 ರಂದು ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ 75ನೇ ಗಣರಾಜ್ಯೋತ್ಸವ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೂ ಮುನ್ನ ಒಂದು ವಾರ ಮುಂಚಿತವಾಗಿ ನಗರದ ಸ್ವಚ್ಚತೆಗೆ ಕ್ರಮವಹಿಸಲು ನಗರ ಸಭೆ ಆಯುಕ್ತರಿಗೆ ಸೂಚಿಸಿದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಣ ಮಾಡಿಸಿ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಕ್ರಮವಹಿಸಿ, ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ, ರೈತ ಗೀತೆ, ಮತ್ತು ನಾಡಗೀತೆಯನ್ನು ಸಂಗೀತ ಶಿಕ್ಷಕರುಗಳಿಂದ ಆಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ನಿರ್ದೇಶನ ನೀಡಿದರು.
ವೇದಿಕೆ ಸಿದ್ಧತೆ,ರಾಷಟ್ರೆಧ್ವಜಾರೋಣ ವ್ಯವಸ್ಥೆ, ಆಕರ್ಷಕ ಪಥಸಂಚಲನ, ಸನ್ಮಾನ, ಉಪಹಾರ ವ್ಯವಸ್ಥೆಗೆ ಈಗಾಗಲೇ ರಚಿಸಿರುವ ಉಪ ಸಮಿತಿಗಳು ನಿಗಾವಹಿಸಿ ಕ್ರಮಕೈಗೊಳ್ಳಲು ಸೂಚಿಸಿದರು. ಶಾಲಾ ಕಾಲೇಜು ಮಕ್ಕಳಿಗೆ ಚರ್ಚಾ ಸ್ಪರ್ಧೆ ಮತ್ತು ರಸ ಪ್ರಶ್ನೆ ಸ್ಪರ್ಧೆ ಏರ್ಪಡಿಸುವಂತೆ ತಿಳಿಸಿದರು.
ಗಣರಾಜ್ಯೋತ್ಸವದ ಸಂದೇಶ ಸಿದ್ದತೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಇದು ರಾಷ್ಟ್ರೀಯ ಹಬ್ಬ ಎಲ್ಲರ ಪಾಲ್ಗೋಳುವಿಕೆ ಬಹು ಮುಖ್ಯ ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರಿಗೆ ಸನ್ಮಾನ: ಶೌರ್ಯ ಪ್ರಶಸ್ತಿ ಪುರಸ್ಕೃತರು, ಮಾಜಿ ಸೈನಿಕರು, ಪೌರಕಾರ್ಮಿಕರು, ಅಪಘಾತ ರಹಿತ ಚಾಲಕರು, ಹೋಂ ಗಾರ್ಡ್, ಎನ್‌ಸಿ.ಸಿ, ಸ್ಕೌಟ್ ಅಂಡ್ ಗೈಡ್ಸ್, ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ, ಕೃಷಿ, ಸಮಾಜ ಸೇವೆ, ವಿಕಲಚೇತನರು, ವೈದ್ಯಕೀಯ ಕ್ಷೇತ್ರ , ಪತ್ರಿಕಾ ಕ್ಷೇತ್ರ, ಪರಿಸರ ಕ್ಷೇತ್ರ, ಕಲೆ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವವರಿಗೆ ಸನ್ಮಾನಿಸಲಾಗುವುದು.
ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳಿಗೆ ದೀಪಾಲಂಕಾರಕ್ಕೆ ಅಧಿಕಾರಿಗಳು ಕ್ರಮವಹಿಸಿ ಎಂದು ತಿಳಿಸಿದ ಜಿಲ್ಲಾಧಿಕಾರಿಯವರು ಖಾಸಗಿ ವಾಣಿಜ್ಯ ಕಟ್ಟಡಗಳಿಗೂ ಮಾಲೀಕರುಗಳು ದೀಪಾಲಂಕಾರ ಮಾಡಲು ತಿಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆವತಿಯಿಂದ ಜ.26 ರಿಂದ ಮೂರು ದಿನಗಳ ಕಾಲ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ಫಲ ಪುಷ್ಪ ಪ್ರದರ್ಶನ ಆಯೋಜನೆಗೆ ಅಗತ್ಯಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಉಪ ವಿಭಾಗಾಧಿಕಾರಿ ಮಾರುತಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕ ಸುಜಯ್, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net