

ಚಿಕ್ಕಬಳ್ಳಾಪುರ: ಅಮೃತ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮತ್ತಷ್ಟು ಆಕಷರ್ಣೀಯವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಪೂರ್ವಭಾವಿಯಾಗಿ ಪಥ ಸಂಚಲನ ಮತ್ತು ಸಾಂಸ್ಕೃತಿಕ ನೃತ್ಯದ ತಾಲೀಮು ನಡೆಯಿತು.
ಈಗಾಗಲೇ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನೇತೃತ್ವದಲ್ಲಿ ಪೊಲೀಸರು, ಗೃಹ ರಕ್ಷಕದಳ ಸಿಬ್ಬಂದಿ, ದೈಹಿಕ ಶಿಕ್ಷಣ ವಿದ್ಯಾಲಯ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಥ ಸಂಚಲನ ಅಭ್ಯಾಸ ಮಾಡಿದರು. ತೆರೆದ ವಾಹನದಲ್ಲಿ ಕರೆದೊಯ್ದು ಪಥ ಸಂಚಲನದ ತಂಡಗಳಿಗೆ ಪರಿಚಯ, ಬಳಿಕ ಧ್ವಜಾರೋಹಣ, ಪೊಲೀಸ್ ಇಲಾಖೆಯ ತಂಡದಿಂದ ಬ್ಯಾಂಡ್‌ಸೆಟ್ ಮೂಲಕ ರಾಷ್ಟ್ರಗೀತೆ ಮತ್ತು ವಿದ್ಯಾರ್ಥಿಗಳ ತಂಡದಿಂದ ನಾಡಗೀತೆ ಗಾಯನ, ವಿವಿಧ ತಂಡಗಳಿಂದ ಪಥ ಸಂಚಲನ, ಧ್ವಜ ವಂದನೆ, ಗೌರವ ವಂದನೆ ಸೇರಿದಂತೆ ನಾನಾ ಚಟುವಟಿಕೆಯ ತಾಲೀಮು ನಡೆಯಿತು.
ದೇಶಭಕ್ತಿ ಗೀತೆಗೆ ನೃತ್ಯ: ಕಳೆದ ಎರಡು ವರ್ಷಗಳಲ್ಲಿ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ರದ್ದುಪಡಿಸಲಾಗಿತ್ತು. ಸೀಮಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಆಯಾ ಶಾಲಾ ಕಾಲೇಜುಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇದರಿಂದ ಧ್ವಜಾರೋಹಣ, ಕಡಿಮೆ ತಂಡಗಳ ಪಥ ಸಂಚಲನ, ಸಚಿವರ ಭಾಷಣ ಮತ್ತು ಸಾಧಕರಿಗೆ ಸನ್ಮಾನದೊಂದಿಗೆ ಕಾರ್ಯಕ್ರಮ ಮುಕ್ತಾಯ ಕಾಣುತ್ತಿತ್ತು. ಮತ್ತೊಂದೆಡೆ ಕರೊನಾ ಆತಂಕ ಕಾಡುತ್ತಿತ್ತು. ಇದರಿಂದ ಸಂಭ್ರಮ ಸ್ವಲ್ಪ ಮಂಕಾದ ರೀತಿಯಲ್ಲಿ ಭಾಸವಾಗುತ್ತಿತ್ತು. ಆದರೆ, ಈ ಬಾರಿ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಭಕ್ತಿ ಗೀತೆಗೆ ವಿವಿಧ ಶಾಲಾ ಕಾಲೇಜು ತಂಡಗಳ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ನೃತ್ಯ ತಾಲೀಮು ನಡೆಸಿದರು.
ಸ್ವಾತಂತ್ರ್ಯೋತ್ಸವ ದಿನಾಚರಣೆ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆ.15ರಂದು ಬೆಳಗ್ಗೆ 9ಕ್ಕೆ ಭಾರತದ 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಕೈಗೊಳ್ಳಲಾಗಿದೆ. ಜಿಲ್ಲಾಡಳಿತ, ಜಿಪಂ ಕೈಗೊಂಡಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಡಾ.ಕೆ.ಸುಧಾಕರ್ ವಹಿಸಲಿದ್ದಾರೆ. ಸಂಸದ ಬಿ.ಎನ್.ಬಚ್ಚೇಗೌಡ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಮತ್ತಿತರರು ಭಾಗವಹಿಸಲಿದ್ದಾರೆ.