

ಬೆಂಗಳೂರು: 75ನೇ ಸ್ವಾತಂತ್ರೊ್ಯೕತ್ಸವ ದಿನದಂದು ಸಿಎಂ ಬಸವರಾಜ ಬೊಮ್ಮಾಯಿ ಘೊಷಿಸಿದ ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಗುರುವಾರ ಚಾಲನೆ ನೀಡಲಿದ್ದಾರೆ ಎಂದು ಆರ್ಡಿಪಿಆರ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಕೆ.ಎಸ್. ಲಿಂಗೇಶ್ ಪ್ರಶ್ನೆಗೆ ಉತ್ತರಿಸಿ, ಈ ಯೋಜನೆಯಲ್ಲಿ ಆಯ್ಕೆಯಾದ 750 ಗ್ರಾ.ಪಂ.ಗೆ ತಲಾ 25 ಲಕ್ಷ ರೂ. ನೀಡಲಾಗುತ್ತಿದೆ. ಕಾಲಮಿತಿಯೊಳಗೆ ಕಾಮಗಾರಿ ಮುಗಿಸಬೇಕಿರುವ ಕಾರಣ ಕಾಮಗಾರಿ ಪೂರ್ಣಗೊಳಿಸಿದ ನಂತರ ಹಣ ಪಾವತಿ ಷರತ್ತು ವಿಧಿಸಲಾಗಿದೆ ಎಂದರು.
ಏನಿದು ಯೋಜನೆ?: ರಾಜ್ಯದಲ್ಲಿ 6008 ಗ್ರಾಪಂಗಳಿದ್ದು, ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿರುವ ಗ್ರಾಪಂಗಳು ಅಭಿವೃದ್ಧಿ ಭಾಗ್ಯ ಪಡೆಯ ಲಿವೆ. ಉದ್ದೇಶಿತ ಎಲ್ಲ ಕಾಮಗಾರಿಗಳು ಮಾರ್ಚ್ 2022 ರೊಳಗೆ ಸಮರ್ಪಕವಾಗಿ ಅನುಷ್ಠಾನ ಮಾಡುವ ಗ್ರಾಪಂಗೆ 25 ಲಕ್ಷ ರೂ. ಇನ್ಸೆಂಟಿವ್ ರೂಪದಲ್ಲಿ ಅನಿರ್ಬಂಧಿತ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಲಿದೆ.
ಯೋಜನೆಯಲ್ಲಿ ಏನೇನಿದೆ?: ಗ್ರಾಪಂ ವ್ಯಾಪ್ತಿ ಬೀದಿ ದೀಪಗಳು, ಪ್ರತಿ ಮನೆಗೆ ಶುದ್ಧ ಕುಡಿವ ನೀರು ಸರಬರಾಜು, ಶೇ.100 ಘನತ್ಯಾಜ್ಯ ವಿಂಗಡಣೆ, ವಿಲೇವಾರಿ, ಡಿಜಿಟಲ್ ಲೈಬ್ರರಿ, ಸುಸಜ್ಜಿತ ಶಾಲೆ, ಅಂಗನವಾಡಿ, ಉದ್ಯಾನ ನಿರ್ಮಾಣ ಇತ್ಯಾದಿ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿ ಹಾಗೂ ಕೆರೆ-ಕಟ್ಟೆಗಳ ಪುನಶ್ಚೇತನಗಳು ಈ ಯೋಜನೆಯಲ್ಲಿ ಅಡಗಿದೆ. ಮಾರ್ಗಸೂಚಿಯಂತೆ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ), 15ನೇ ಹಣಕಾಸು, ನರೇಗಾ, ಗ್ರಾಪಂ ಸ್ವಂತ ಅನುದಾನ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕಟ್ಟಡ ಅನುದಾನ ಒಗ್ಗೂಡಿಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲು ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.