

ಬೀದರ್: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಜನ್ಮದಿನ ನಿಮಿತ್ತ ನಗರದಲ್ಲಿ ಭಾನುವಾರ ರಕ್ತದಾನ ಶಿಬಿರ ನಡೆಯಿತು.
ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ 75 ಯುವಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು. ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ. ಅಪಾಯದಲ್ಲಿದ್ದವರ ಪ್ರಾಣ ರಕ್ಷಿಸುವ ರಕ್ತದಾನ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ನನ್ನ ಜನ್ಮದಿನ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ 75 ಜನ ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದರು.
ಕೆಎಸ್ಐಐಡಿಸಿ ಡಾ.ಶೈಲೇಂದ್ರ ಬೆಲ್ದಾಳೆ, ಎಚ್ ಕೆಇ ಸಂಸ್ಥೆ ನಿರ್ದೇಶಕ ಡಾ.ರಜನೀಶ್ ವಾಲಿ, ತರುಣ್ ನಾಗಮಾರಪಳ್ಳಿ, ಕೃಷ್ಣಾರಡ್ಡಿ, ರಾಜೇಂದ್ರ ಪೂಜಾರಿ, ಮಲೀಕನಾಥ ಮಾಡಿಗೆ, ಡಾ.ದೀಪಕ ಚೋಕಡೆ, ಡಾ.ವಿನೋದ ಭೋರಲೆ, ಡಾ.ಬಿ.ಎಸ್. ಪ್ರಭಾ ಇತರರಿದ್ದರು.
ನಾಗಮಾರಪಳ್ಳಿ ಜನ್ಮ ದಿನವನ್ನು ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಹರ್ಷೋಲ್ಲಾಸದಿಂದ ಆಚರಿಸಿದರು. ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.